`ಶಿರಸಿಯಿಂದ ಹೊರಟೆ’ ಎಂದು ತಂದೆಗೆ ಫೋನ್ ಮಾಡಿ ಹೊರಟಿದ್ದ ಯಲ್ಲಾಪುರದ ವಿವೇಕ ಭಟ್ಟ ಅವರು ಅರ್ದದಾರಿಯಲ್ಲಿಯೇ ಅಂತ್ಯವಾಗಿದ್ದಾರೆ. ತಡರಾತ್ರಿ ನಡೆದ ಬೈಕ್ ಅಪಘಾತದಲ್ಲಿ ಅವರು ಸಾವನಪ್ಪಿದ್ದಾರೆ.
ಯಲ್ಲಾಪುರ ಬಿಸಗೋಡು ಬಳಿಯ ಕೆಳಗಿನಪಾಲ್ ಬಳಿ ವಿವೇಕ ಭಟ್ಟ ಅವರು ವಾಸವಾಗಿದ್ದರು. 25 ವರ್ಷದ ಅವರು ಕೃಷಿ ಜೊತೆ ಬೈಕ್ ಮೆಕಾನಿಕ್ ಆಗಿ ಬದುಕು ಕಟ್ಟಿಕೊಂಡಿದರು. BSNL ಸಹಯೋಗದಲ್ಲಿ ಹಳ್ಳಿ ಹಳ್ಳಿಗೂ FTTH ಇಂಟರನೆಟ್ ಕನೆಕ್ಷನ್ ನೀಡುವಲ್ಲಿಯೂ ಶ್ರಮಿಸಿದ್ದರು. ಈಚೆಗೆ ಅವರು ತಮ್ಮ ಬೈಕನ್ನು ಶಿರಸಿಯ ಶೋರೂಮಿಗೆ ಸರ್ವಿಸ್ ಮಾಡಿಸಲು ಬಿಟ್ಟಿದ್ದರು. ಅಕ್ಟೊಬರ್ 17ರ ಸಂಜೆ ಬೈಕ್ ಪಡೆಯಲು ಅವರು ಶಿರಸಿಗೆ ಹೋಗಿದ್ದರು.
ರಾತ್ರಿ 11 ಗಂಟೆಗೆ ತಂದೆ ದತ್ತಾತ್ರೇಯ ಭಟ್ಟ ಅವರಿಗೆ ವಿವೇಕ ಭಟ್ಟ ಅವರು ಫೋನ್ ಮಾಡಿದ್ದರು. ಶಿರಸಿಯಿಂದ ಊರಿಗೆ ಬರುತ್ತಿರುವ ಬಗ್ಗೆ ಹೇಳಿದ್ದರು. ಆದರೆ, ಆ ದಿನ ರಾತ್ರಿಯೇ ಅವರು ಅಪಘಾತದಲ್ಲಿ ಸಾವನಪ್ಪಿದ್ದರು. ಅಕ್ಟೊಬರ್ 18ರ ಬೆಳಗ್ಗೆ 7.45ರ ವೇಳೆಗೆ ಶಿರಸಿ-ಯಲ್ಲಾಪುರ ರಸ್ತೆಯ ತಾರಿಹಳ್ಳಿ ಬಸ್ ನಿಲ್ದಾಣದ ಬಳಿ ವಿವೇಕ ಭಟ್ಟ ಅವರ ಶವ ನೋಡಿದವರು ಅವರ ಸಂಬoಧಿ ವಿನಯ ಗೋಪಾಲಕೃಷ್ಣ ಭಟ್ಟ ಅವರಿಗೆ ಈ ವಿಷಯ ತಿಳಿಸಿದರು. ಅವರು ಫೋನ್ ಮಾಡಿ ಕುಟುಂಬಕ್ಕೆ ಮಾಹಿತಿ ನೀಡಿದರು. ಬೈಕಿನಿಂದ ಬಿದ್ದ ರಭಸಕ್ಕೆ ವಿವೇಕ ಭಟ್ಟ ಅವರು ಗಂಭೀರ ಪ್ರಮಾಣದಲ್ಲಿ ಗಾಯಗೊಂಡು ಸಾವನಪ್ಪಿರುವುದನ್ನು ಅವರ ಮಾವ ಮಂಜುನಾಥ ತಿಮ್ಮಣ್ಣ ಭಟ್ಟ ಅವರು ದೃಢಪಡಿಸಿದರು.
ಪಿಸೈ ಸಿದ್ದಪ್ಪ ಗುಡಿ, ಪಿಐ ಸುರೇಶ ಕುಂಬಾರ ಅವರು ಸ್ಥಳ ಪರಿಶೀಲನೆ ಮಾಡಿದ್ದಾರೆ. ವಿವೇಕ ಭಟ್ಟ ಅವರ ಶವವನ್ನು ಯಲ್ಲಾಪುರ ಸರ್ಕಾರಿ ಆಸ್ಪತ್ರೆಗೆ ತಂದು, ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.