ಯಲ್ಲಾಪುರದಲ್ಲಿ ಬೇಡ್ತಿ-ವರದಾ ನದಿ ಜೋಡಣೆ ಯೋಜನೆ ವಿರೋಧಿಸಿ ಹೋರಾಟ ನಡೆಯುತ್ತಿದ್ದು, ಅದೇ ವೇಳೆ ಮಂಚಿಕೇರಿ ಹಾಗೂ ಶಿರನಾಲಾ ವ್ಯಾಪ್ತಿಯಲ್ಲಿ ಲಘು ವಿಮಾನವೊಂದು ಹಾರಾಟ ನಡೆಸಿದೆ. ಮೈನಳ್ಳಿ, ಚಿಗಳ್ಳಿ ಭಾಗದವರೆಗೂ ಸಂಚರಿಸಿದ ವಿಮಾನ ಕುಂದರಗಿ ಹಾಗೂ ಸೋಂದಾ ಭಾಗದಲ್ಲಿ ಯೂಟರ್ನ ಹೊಡೆದಿದೆ.
ಮಾಹಿತಿಗಳ ಪ್ರಕಾರ ಆಸ್ಟೇಲಿಯಾ ನೋಂದಣಿಯ ವಿಮಾನ ಹಾರಾಟ ನಡೆಸಿದ್ದು, ಅದು ನೇರವಾಗಿ ಸಂಚರಿಸುವ ಬದಲು ಅಲ್ಲಿನ ಊರುಗಳ ಮೇಲ್ಬಾಗ ವಿಮಾನ ಸುತ್ತಾಟ ನಡೆಸಿದೆ. ಮಂಗಳವಾರ ಬೆಳಿಗ್ಗೆ ಸುಮಾರು 8.30ರಿಂದ ಸಂಜೆ 5 ಗಂಟೆಯವರೆಗೆ ಈ ಭಾಗದಲ್ಲಿ ವಿಮಾನ ಹಾರಾಟ ನಡೆಸಿದೆ. ಮೈನಳ್ಳಿ, ಚಿಗಳ್ಳಿ ಭಾಗದವರೆಗೂ ಸಂಚರಿಸಿದ ವಿಮಾನ ಕುಂದರಗಿ ಹಾಗೂ ಸೋಂದಾ ಭಾಗದಲ್ಲಿ ಯೂಟರ್ನ ಹೊಡೆದಿದೆ. ಒಂದೇ ಪ್ರದೇಶದಲ್ಲಿ ಮೂರಕ್ಕೂ ಅಧಿಕ ಬಾರಿ ವಿಮಾನ ಹಾರಾಟ ನಡೆದಿದೆ. ಪ್ಲೆಟ್ 24 ಅಪ್ಲಿಕೇಶನ್’ನಲ್ಲಿ ದಾಖಲಾದ ಮಾಹಿತಿಗಳ ಪ್ರಕಾರ ಭೂಮಿಯಿಂದ 1ಕಿಮೀ ಎತ್ತರದಲ್ಲಿ ವಿಮಾನ ಹಾರಾಟ ನಡೆದಿದೆ. ಸೀಮಿತ ಪ್ರದೇಶದಲ್ಲೇ ಹಲವು ಬಾರಿ ಕೆಳಮಟ್ಟದಲ್ಲಿ ವಿಮಾನ ಹಾರಾಡಿರುವುದನ್ನು ಸ್ಥಳೀಯರು ನೋಡಿದ್ದಾರೆ. ವಿಮಾನವೂ ಕೆಲ ಊರುಗಳನ್ನು ಪದೇ ಪದೇ ಸುತ್ತುವರೆದು ಪ್ರದಕ್ಷಿಣೆ ಹಾಕಿದೆ.
ಸದ್ಯ ಹಾರಾಟ ನಡೆಸಿದ ವಿಮಾನಗಳನ್ನು ಮ್ಯಾಪಿಂಗ್ ಕೆಲಸಗಳಿಗೆ ಬಳಸಲಾಗುತ್ತದೆ. ನೆಲದ ಮೇಲಿನ ಭೌಗೋಳಿಕ ಸರ್ವೇ, ಖನಿಜಗಳ ಶೋಧನೆ, ಗಡಿ ಗುರುತಿಸುವಿಕೆ ಹಾಗೂ ನಕ್ಷೆ ತಯಾರಿಸುವ ಉದ್ದೇಶಗಳಿಗೆ ಇಂಥ ವಿಮಾನಗಳ ಬಳಕೆ ನಡೆಯುತ್ತದೆ. ಹೀಗಾಗಿ ಬೇಡ್ತಿ-ವರದಾ ನದಿ ಪ್ರದೇಶಗಳಲ್ಲಿ ನದಿ ಜೋಡಣೆ ಯೋಜನೆಗೆ ಸಂಬoಧಿಸಿದ ವೈಮಾನಿಕ ಸಮೀಕ್ಷೆ ನಡೆಸಲಾಗಿದೆಯೇ? ಎಂಬ ಆತಂಕ ಸ್ಥಳೀಯರಲ್ಲಿ ವ್ಯಕ್ತವಾಗಿದೆ. ಇದೇ ವೇಳೆ, ಸೋಮವಾರ ಶಿರಸಿ ತಾಲೂಕಿನ ಮೂರೆಗಾರ್ ಮತ್ತು ಮತ್ತಿಘಟ್ಟಾ ಭಾಗಗಳಲ್ಲಿಯೂ ಇದೇ ರೀತಿಯ ವಿಮಾನ ಹಾರಾಟ ನಡೆದಿದ್ದು, ಇನ್ನಷ್ಟು ಅನುಮಾನಕ್ಕೆ ಕಾರಣವಾಗಿದೆ.