ಫಲಾನುಭವಿಗೆ ನ್ಯಾಯಯುತವಾಗಿ ದೊರೆಯಬೇಕಾದ ಗೃಹಲಕ್ಷ್ಮಿ ಹಣವನ್ನು ತನ್ನ ಬೊಕ್ಕಸದಲ್ಲಿಯೇ ಉಳಿಸಿಕೊಳ್ಳಲು ಸರ್ಕಾರ ಹೊಸ ತಂತ್ರವೊoದನ್ನು ಅನುಸರಿಸಿದೆ. ಮಹಿಳೆಯೊಬ್ಬರು ಬದುಕಿದ್ದರೂ ಅವರು ಸಾವನಪ್ಪಿರುವ ನೆಪವೊಡ್ಡಿ ಅವರಿಗೆ ಕೊಡಬೇಕಾದ ಗೃಹಲಕ್ಷ್ಮಿ ಹಣಕ್ಕೆ ತಡೆ ಒಡ್ಡಲಾಗಿದೆ!
ಕಾರವಾರದ ಮುದಗಾ ನಿರಾಶ್ರಿತರ ಕಾಲೊನಿಯಲ್ಲಿ ಕಲ್ಪನಾ ದುರ್ಗೇಕರ ಅವರು ವಾಸವಾಗಿದ್ದಾರೆ. ಅವರು ಜೀವಂತವಾಗಿದ್ದರೂ ಗೃಹಲಕ್ಷ್ಮಿ ತಂತ್ರಾoಶ ಮಾತ್ರ `ನಿಧನ’ ಎಂದು ಕಾಣಿಸುತ್ತಿದೆ. ಹೀಗಾಗಿ ಅವರು ಗೃಹಲಕ್ಷ್ಮಿ ಯೋಜನೆಯಿಂದ ವಂಚಿತರಾಗಿದ್ದಾರೆ. ಗೃಹಲಕ್ಷ್ಮಿ ಯೋಜನೆಗಾಗಿ ಅವರು ಕಚೇರಿಯಿಂದ ಕಚೇರಿಗೆ ಅಲೆದಾಡುತ್ತಿದ್ದರೂ ಅವರು ಬದುಕಿರುವುದು ಅಧಿಕಾರಿಗಳಿಗೆ ಕಾಣುತ್ತಿಲ್ಲ. ಹೀಗಾಗಿ ಅವರಿಗೆ ಸರ್ಕಾರದಿಂದ ದೊರೆಯಬೇಕಾದ ಗೃಹಲಕ್ಷ್ಮಿ ಹಣವೂ ಸಿಗುತ್ತಿಲ್ಲ!
ಕಲ್ಪನಾ ದುರ್ಗೇಕರ ಅವರು `ನಾನು ಇನ್ನೂ ಸತ್ತಿಲ್ಲ’ ಎಂದು ಎಂದು ಹೇಳಿದರೂ ಅದನ್ನು ನಂಬುವವರಿಲ್ಲ. ಹೀಗಾಗಿ ಕಲ್ಪನಾ ದುರ್ಗೇಕರ್ ಅವರಿಗೆ ಗೃಹಲಕ್ಷ್ಮಿ ಹಣ ಪಡೆಯುವುದಕ್ಕಿಂತಲೂ ಅವರು ಬದುಕಿರುವ ಬಗ್ಗೆ ಸಾಭೀತು ಮಾಡುವುದೇ ದೊಡ್ಡ ಸವಾಲಾಗಿದೆ. ಕಲ್ಪನಾ ದುರ್ಗೇಕರ್ ಅವರ ಬಳಿ ಆಧಾರ್ ಕಾರ್ಡ ಇದೆ. ರೇಶನ್ ಕಾರ್ಡ ಇದೆ. ಈಚೆಗೆ ಮತದಾರರ ಪರಿಷ್ಕರಣ ಪಟ್ಟಿಯಲ್ಲಿ ಅವರ ಹೆಸರು ಬಂದಿದೆ. ಹೀಗಾಗಿ, ಗೃಹಲಕ್ಷ್ಮಿ ದಾಖಲೆಯಲ್ಲಿ ನಿಧನರಾದ ಬಗ್ಗೆ ನಮೂದಾದರೂ ಉಳಿದ ಕಡೆ ಜೀವಂತವಾಗಿರುವ ಕಾರಣಕ್ಕೆ ಅವರು ಕೊಂಚ ನಿರಾಳರಾಗಿದ್ದಾರೆ.
ಗೃಹಲಕ್ಷ್ಮಿ ಯೋಜನೆಯ ಸೌಲಭ್ಯಕ್ಕಾಗಿ ಕಲ್ಪನಾ ದುರ್ಗೇಕರ್ ಅವರು ಅರ್ಜಿ ಸಲ್ಲಿಸಿದ್ದರು. ಆ ವೇಳೆ ಅವರ ಪತಿ ಜೀವಂತವಾಗಿದ್ದರು. ಕಲ್ಪನಾ ದುರ್ಗೇಕರ್ ಅವರ ಪತಿ ಕಳೆದ ವರ್ಷ ನಿಧನರಾಗಿದ್ದು, ಪತಿ ನಿಧನದ ನಂತರ ಕಲ್ಪನಾ ದುರ್ಗೇಕರ್ ಅವರನ್ನು ಸರ್ಕಾರ ನಿಧನದ ಪಟ್ಟಿಗೆ ಸೇರಿಸಿದೆ. ಹೀಗಾಗಿ ಅವರಿಗೆ ಈವರೆಗೂ ಗೃಹಲಕ್ಷ್ಮಿ ಯೋಜನೆಯ ಸೌಲಭ್ಯ ಸಿಕ್ಕಿಲ್ಲ. ಗೃಹಲಕ್ಷ್ಮಿ ಯೋಜನೆಗಾಗಿ ಕಲ್ಪನಾ ದುರ್ಗೇಕರ್ ಅವರು ಒಂಟಿಯಾಗಿ ಸರ್ಕಾರಿ ಕಚೇರಿ ಅಲೆದಾಡಿದರೂ ಅದರಿಂದ ಪ್ರಯೋಜನವಾಗಿಲ್ಲ.