ಶಾಂತಿ ನಗರದ ಜ್ಯೋತಿ ಮಾಲಿ ಅವರಿಗೆ ಮದುವೆ ಆಗುವುದಾಗಿ ನಂಬಿಸಿದ ದೇವರಾಜ ಅಂಗಡಿ ಎಂಬಾತರು ಜ್ಯೋತಿ ಮಾಲಿ ಅವರಿಂದಲೇ ಹಣಪಡೆದು ಮೋಸ ಮಾಡಿದ್ದಾರೆ. ಜ್ಯೋತಿ ಮಾಲಿ ಅವರ ಪರಿಚಯಸ್ಥರಾದ ಡಾ ಶ್ರೀಶೈಲ್ ಮದನ್ನನವರ್ ಹಾಗೂ ಮಂಜುನಾಥ ಕೋಳೂರು ಅವರು ಸಹ ಹಣ ಕೊಟ್ಟು ಕೆಟ್ಟಿದ್ದಾರೆ.
ಹಳಿಯಾಳದ ಶಾಂತಿ ನಗರದಲ್ಲಿ ಜ್ಯೋತಿ ರಾಮಪ್ಪ ಮಾಲಿ ಅವರು ವಾಸವಾಗಿದ್ದಾರೆ. ತುಮಕೂರಿನ ದೇವರಾಜ ಅಂಗಡಿ ಎಂಬಾತರು ಜ್ಯೋತಿ ಮಾಲಿ ಅವರಿಗೆ ಪರಿಚಯರಾಗಿದ್ದಾರೆ. ಪ್ರೀತಿ-ಪ್ರೇಮದ ನಾಟಕವಾಡಿದ ದೇವರಾಜ ಅಂಗಡಿ ಅವರು `ನಿನ್ನನ್ನೇ ಮದುವೆ ಆಗುವೆ’ ಎಂದು ಜ್ಯೋತಿ ಮಾಲಿ ಅವರನ್ನು ನಂಬಿಸಿದ್ದಾರೆ. 2025ರ ಸೆಪ್ಟೆಂಬರ 2ರಂದು ಅವರಿಬ್ಬರು ಮದುವೆ ಒಪ್ಪಂದ ಮಾಡಿಕೊಂಡಿದ್ದಾರೆ. ಅದಾದ ನಂತರ ತಮ್ಮ ಪ್ರಭಾವ ಬೀರಿ ಪರಿಚಯಸ್ಥರಿಗೆ ಗ್ಯಾಸ್ ಎಜನ್ಸಿ ಕೊಡಿಸುವುದಾಗಿಯೂ ದೇವರಾಜ ಅಂಗಡಿ ಅವರು ಹೇಳಿದ್ದಾರೆ.
ಮದುವೆ ಆಗುವ ಹುಡುಗನ ಮೇಲೆ ವಿಶ್ವಾಸದಿಂದಿದ್ದ ಜ್ಯೋತಿ ಮಾಲಿ ಅವರು ಹಳಿಯಾಳದ ದುರ್ಗಾನಗರದಲ್ಲಿರುವ ವೈದ್ಯ ಶ್ರೀಶೈಲ್ ಮದನ್ನನವರ್ ಅವರನ್ನು ಭೇಟಿಯಾಗಿದ್ದಾರೆ. ಜೊತೆಗೆ ಮಂಜುನಾಥ ಪರಶುರಾಮ ಕೋಳೂರು ಅವರ ಬಳಿಯೂ ಗ್ಯಾಸ್ ಎಜನ್ಸಿ ಬಗ್ಗೆ ಮಾತನಾಡಿದ್ದಾರೆ. ಜ್ಯೋತಿ ಮಾಲಿ ಅವರು 5.50 ಲಕ್ಷ ರೂ ಹಣವನ್ನು ದೇವರಾಜ ಅಂಗಡಿ ಅವರಿಗೆ ವರ್ಗಾಯಿಸಿದ್ದಾರೆ. ಜೊತೆಗೆ ಶ್ರೀಶೈಲ್ ಮದನ್ನನವರ್ ಅವರಿಂದ 3.10 ಲಕ್ಷ ರೂ ಹಾಗೂ ಮಂಜುನಾಥ ಕೋಳೂರು ಅವರಿಂದ 8.20 ಲಕ್ಷ ರೂ ಹಣವನ್ನು ದೇವರಾಜ ಅಂಗಡಿ ಅವರಿಗೆ ಕೊಡಿಸಿದ್ದಾರೆ. ಜ್ಯೋತಿ ಮಾಲಿ ಅವರ ಚಿಕ್ಕಪ್ಪನ ಮನೆಯಲ್ಲಿಯೇ ಈ ಎಲ್ಲಾ ವ್ಯವಹಾರ ಫೋನ್ ಪೇ ಮೂಲಕ ನಡೆದಿದೆ.
ಆದರೆ, ದೇವರಾಜ ಅಂಗಡಿ ಅವರು ಅದಾದ ನಂತರ ತಮ್ಮ ವರಸೆ ಬದಲಿಸಿದ್ದಾರೆ. 16.80 ಲಕ್ಷ ರೂ ಪಡೆದ ದೇವರಾಜ ಅಂಗಡಿ ಗ್ಯಾಸ್ ಎಜನ್ಸಿ ಕೊಡಿಸದೇ ಮೋಸ ಮಾಡಿದ್ದಾರೆ. ಮದುವೆ ಆಗಬೇಕಾದ ಹುಡುಗನಿಂದಲೇ ಮೋಸಹೋದ ಜ್ಯೋತಿ ಮಾಲಿ ಅವರು ಕಾನೂನು ಹೋರಾಟ ಶುರು ಮಾಡಿದ್ದಾರೆ.