ಕಾರವಾರ ಬಸ್ ನಿಲ್ದಾಣ ಬಳಿಯ ಕರಾವಳಿ ಹೊಟೇಲ್ ಮಾಲಕ ಜಯರಾಮ ಮಡಿವಾಳ ಅವರಿಗೆ ಕೆಂಡದoಥ ಕೋಪ ಬರುತ್ತದೆ. ಆ ಕೋಪದಲ್ಲಿಯೇ ಅವರು ಹೊಟೇಲಿಗೆ ಬಂದಿದ್ದ ಹಳಿಯಾಳದ ಸರ್ಕಾರಿ ಸಿಬ್ಬಂದಿ ಶಾಂತಕುಮಾರ ಕೆಂಪಣ್ಣಗೋಳ್ ಅವರ ಮುಖಕ್ಕೆ ಬಿಸಿ ಬಿಸಿ ಕುದಿಯುವ ನೀರು ಹೊಡೆದಿದ್ದಾರೆ!
ಹಬ್ಬುವಾಡದ ಹಳೆಯ ಕೆ ಎಚ್ ಬಿ ಕಾಲೋನಿಯ ಇಜಾನ್ ಹೈಟ್ಸ್ ಬಳಿ ಜಯರಾಮ ಬಂಗಾರ್ಯ ಮಡಿವಾಳ ಅವರು ವಾಸವಾಗಿದ್ದಾರೆ. ಕಾರವಾರದ ಬಸ್ ನಿಲ್ದಾಣದ ಬಳಿ ಅವರು ಕರಾವಳಿ ಹೊಟೇಲ್ ನಡೆಸುತ್ತಿದ್ದಾರೆ. ಹೊಟೇಲ್’ಗೆ ಬರುವ ಗ್ರಾಹಕರ ಜೊತೆ ಸಿಡಿಮಿಡಿಯಿಂದಲೇ ಮಾತನಾಡುವ ಅವರು `ಇಲ್ಲಿ ತಿಂಡಿ ಸರಿಯಾಗಿಲ್ಲ’ ಎಂದ ಕಾರಣ ಸರ್ಕಾರಿ ಸಿಬ್ಬಂದಿಗೆ ನೋವು ಮಾಡಿದ್ದಾರೆ. ಜಯರಾಮ ಮಡಿವಾಳ ಅವರು ಬಿಸಿ ನೀರು ಎರಚಿದ ಪರಿಣಾಮ ಶಾಂತಕುಮಾರ ಕೆಂಪಣ್ಣಗೋಳ್ ಅವರ ಮುಖ, ಕುತ್ತಿಗೆ, ಬೆನ್ನು, ಎದೆಯ ಭಾಗದ ಚರ್ಮ ಸುಟ್ಟುಹೋಗಿದೆ.
ಬೆಳಗಾವಿ ಹುಕ್ಕೇರಿಯ ಶಾಂತಕುಮಾರ ಕೆಂಪಣ್ಣಗೋಳ್ ಅವರು ಸರ್ಕಾರಿ ಸಿಬ್ಬಂದಿಯಾಗಿದ್ದು, ಹಳಿಯಾಳ ಟ್ರಜೇರಿ ಕಚೇರಿಯ ಪ್ರಥಮ ದರ್ಜೆ ಸಹಾಯಕರಾಗಿ ಅವರು ಕೆಲಸ ಮಾಡುತ್ತಿದ್ದಾರೆ. ನವೆಂಬರ್ 3ರಂದು ಕೆಲಸದ ಅಂಗವಾಗಿ ಕಾರವಾರಕ್ಕೆ ಬಂದಿದ್ದರು. ಆ ದಿನ ಕೆಲಸ ಮುಗಿಸಿ ಸಂಜೆ ಮರಳುವ ಪ್ರಯತ್ನ ಮಾಡಿದ್ದರು. ಆದರೆ, ಬಸ್ ಸಿಗದ ಕಾರಣ ನಿಲ್ದಾಣದಲ್ಲಿಯೇ ರಾತ್ರಿ ಕಳೆದಿದ್ದರು. ನವೆಂಬರ್ 4ರ ಬೆಳಗ್ಗೆ ಅವರು ತಿಂಡಿ ತಿನ್ನಲು ಬಸ್ ನಿಲ್ದಾಣ ಬಳಿಯ ಕರಾವಳಿ ಹೊಟೇಲ್’ಗೆ ಹೋಗಿದ್ದರು. ಅಲ್ಲಿ ತಿಂಡಿ ತಿಂದ ಅವರು ಚಹಾ ಕುಡಿದರು.
ಆದರೆ, ಕರಾವಳಿ ಹೊಟೇಲಿನ ಆ ಅಡುಗೆ ಶಾಂತಕುಮಾರ ಕೆಂಪಣ್ಣಗೋಳ್ ಅವರಿಗೆ ಹಿಡಿಸಲಿಲ್ಲ. ಆ ವೇಳೆಗೆ ಅಲ್ಲಿ ಹೊಟೇಲ್ ಮಾಲಕ ಜಯರಾಮ ಮಡಿವಾಳ ಅವರು ಆಗಮಿಸಿದ್ದು, `ಇಲ್ಲಿ ತಿಂಡಿ ಚನ್ನಾಗಿಲ್ಲ’ ಎಂದು ಹೇಳಿದರು. ಇದನ್ನು ಸಹಿಸದ ಜಯರಾಮ ಮಡಿವಾಳ ಅವರು ಏಕಾಏಕಿ ಸಿಟ್ಟಾದರು. ತಮ್ಮ ಕೈಯಲ್ಲಿದ್ದ ಬಿಸಿ ನೀರನ್ನು ನೇರವಾಗಿ ಶಾಂತಕುಮಾರ ಕೆಂಪಣ್ಣಗೋಳ್ ಅವರ ಮುಖಕ್ಕೆ ಚೆಲ್ಲಿದರು. `ನಿನ್ನಂಥ ಭಿಕ್ಷಕನಿಗೆ ಇನ್ನೇಂಥ ತಿಂಡಿ ಕೊಡಬೇಕು?’ ಎಂದು ದಬಾಯಿಸಿದರು.
ಮೈಮೇಲೆ ಬಿಸಿ ನೀರು ಬಿದ್ದಿದ್ದರಿಂದ ಶಾಂತಕುಮಾರ ಕೆಂಪಣ್ಣಗೋಳ್ ಅವರು ಅಲ್ಲಿಯೇ ಕುಸಿದು ಬಿದ್ದರು. ನೋವು ತಾಳಲಾರದೇ ಬೊಬ್ಬೆ ಹೊಡೆದರು. ಇದನ್ನು ನೋಡಿದ ಜನ ಆಂಬುಲೆನ್ಸಿಗೆ ಫೋನ್ ಮಾಡಿದರು. ಚರ್ಮ ಸುಟ್ಟು ನರಳಾಡುತ್ತಿದ್ದ ಶಾಂತಕುಮಾರ ಕೆಂಪಣ್ಣಗೋಳ್ ಅವರನ್ನು ಜನರೇ ಆಸ್ಪತ್ರೆಗೆ ಕರೆದೊಯ್ದರು. ಸದ್ಯ ಶಾಂತಕುಮಾರ ಕೆಂಪಣ್ಣಗೋಳ್ ಅವರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆಯುತ್ತಿದ್ದಾರೆ. ತಮ್ಮ ಕುಟುಂಬದವರನ್ನು ಕಾರವಾರಕ್ಕೆ ಕರೆಯಿಸಿ, ಆದ ಘಟನಾವಳಿಗಳ ಬಗ್ಗೆ ಅವರು ಮಾಹಿತಿ ನೀಡಿದ್ದಾರೆ.