ಹಾಲು ಹಾಗೂ ನೀರಿನ ದರ ತುಲನೆ ಮಾಡಿ ಮುಖ್ಯಮಂತ್ರಿ ಡಿಕೆ ಶಿವಕುಮಾರ ಅವರು ನೀಡಿದ ಹೇಳಿಕೆಗೆ ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಅವರು ವಿರೋಧಿಸಿದ್ದು, ಸದ್ಯ ಕಾಂಗ್ರೆಸ್ ವಕ್ತಾರ ಶಂಬು ಶೆಟ್ಟಿ ಅವರು ಮಾಧವ ನಾಯಕ ಅವರ ವಿರುದ್ಧ ತಿರುಗಿಬಿದ್ದಿದ್ದಾರೆ. `ನಾನು ನೀಡಿದ ಹೇಳಿಕೆ ಸರಿಯಾಗಿ ಅರ್ಥೈಸಿಕೊಂಡು ಶಂಭು ಶೆಟ್ಟಿ ಅವರು ಮಾತನಾಡಬೇಕು’ ಎಂದು ಮಾಧವ ನಾಯಕ ಅವರು ಪ್ರತಿಕ್ರಿಯಿಸಿದ್ದಾರೆ.
`ನಾನು ಎಲ್ಲಿಯೂ ಮುಖ್ಯಮಂತ್ರಿ ಡಿಕೆ ಶಿವಕುಮಾರ ಅವರಿಗೆ ಅವಮಾನ ಮಾಡುವ ಮಾತನಾಡಿಲ್ಲ. ಅವರ ವ್ಯಕ್ತಿತ್ವಕ್ಕೆ ಧಕ್ಕೆ ತರುವ ಹೇಳಿಕೆ ನೀಡಿಲ್ಲ. ಹಾಲು ಹಾಗೂ ನೀರನ್ನು ಒಂದೇ ಎನ್ನುವ ರೀತಿ ಹೋಲಿಕೆ ಮಾಡುವುದು ಸರಿಯಲ್ಲ ಎಂದು ಮಾತ್ರ ಹೇಳಿದ್ದು, ಕಾಂಗ್ರೆಸ್ ಹಿರಿಯ ನಾಯಕರಾದ ಶಂಬು ಶೆಟ್ಟಿ ಅವರು ಅದನ್ನು ಅರ್ಥ ಮಾಡಿಕೊಳ್ಳಬೇಕು’ ಎಂದು ಮಾಧವ ನಾಯಕ ಅವರು ಹೇಳಿದ್ದಾರೆ.
`ನೀರು ಪ್ರಕೃತಿಯಲ್ಲಿ ಲಭ್ಯವಾಗುವ ನೈಸರ್ಗಿಕ ಸಂಪನ್ಮೂಲ. ಆದರೆ ಹಾಲು ಹಾಗಲ್ಲ. ಹಾಲು ಉತ್ಪಾದನೆಯ ಹಿಂದೆ ರೈತರ ಪರಿಶ್ರಮ, ಹಸುಗಳ ಸಾಕಾಣಿಕೆ, ಪಶು ಆಹಾರ, ಪಶುವೈದ್ಯಕೀಯ ವೆಚ್ಚ, ಕಾರ್ಮಿಕರ ದುಡಿಮೆ ಹಾಗೂ ಹಾಲಿನ ಸಂಗ್ರಹಣೆ ಮತ್ತು ಸಾಗಣೆಯಂತಹ ಅನೇಕ ವೆಚ್ಚಗಳಿವೆ. ಹಾಲು ಕೇವಲ ಒಂದು ವಾಣಿಜ್ಯ ವಸ್ತುವಲ್ಲ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಅನೇಕ ಕುಟುಂಬಗಳ ನಿತ್ಯದ ಪೌಷ್ಟಿಕ ಆಹಾರವಾಗಿದೆ. ಹೀಗಾಗಿ ಹಾಲಿನ ಬೆಲೆ ಮತ್ತು ನೀರಿನ ಬಾಟಲಿಯ ಬೆಲೆಯನ್ನು ಹೋಲಿಕೆ ಮಾಡುವುದು ಸಮಂಜಸವಲ್ಲ ಎಂದು ನಾನು ಹೇಳಿದ್ದು, ಇದರಲ್ಲಿ ಮುಖ್ಯಮಂತ್ರಿಗಳಿಗೆ ಅವಮಾನ ಮಾಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ’ ಎಂದು ಮಾಧವ ನಾಯಕ ಅವರು ಸ್ಪಷ್ಠಪಡಿಸಿದ್ದಾರೆ.
`ಶಂಭು ಶೆಟ್ಟಿ ಅವರು ತನ್ನ ಹೇಳಿಕೆಯನ್ನು ಸರಿಯಾಗಿ ಓದಿದ್ದಾರ? ಅಥವಾ ಅದನ್ನು ತಪ್ಪಾಗಿ ಗ್ರಹಿಸಿದ್ದಾರ? ಎಂದು ಗೊತ್ತಿಲ್ಲ. ಈ ವಿಷಯ ಹೇಳಿದ ಮಾತ್ರಕ್ಕೆ ನಾನು ಮುಖ್ಯಮಂತ್ರಿಗಳಿಗೆ ಅವಮಾನ ಮಾಡಿದಂತಾಗುತ್ತದೆಯೇ?’ ಎಂದು ಅವರು ಪ್ರಶ್ನಿಸಿದ್ದಾರೆ. `ನ್ಯಾಯದೇವತೆಯ ಕೈಯಲ್ಲಿಯೂ ತಕ್ಕಡಿಯೇ ಇದೆ. ತಕ್ಕಡಿ ಎಂದರೆ ನ್ಯಾಯ, ಸಮಾನತೆ ಮತ್ತು ನಿಷ್ಪಕ್ಷಪಾತವಾಗಿ ತೂಗಿ ನೋಡುವ ಸಂಕೇತ. ಸಮಾಜದಲ್ಲಿ ಅನೇಕರು ತಕ್ಕಡಿಯ ಸಂಕೇತವನ್ನು ಬಳಸುತ್ತಾರೆ. ಅದಕ್ಕೆ ರಾಜಕೀಯ ವಿವಾದದ ಬಣ್ಣ ಬಳಿಯುವ ಅಗತ್ಯವೇನಿದೆ?’ ಎಂದು ಮತ್ತೊಂದು ಪ್ರಶ್ನೆ ಆಗಿದ್ದಾರೆ.
`ಶಂಭು ಶೆಟ್ಟಿ ಅವರು ಎಲ್ಐಸಿ ಏಜೆಂಟ್ ಆಗಿದ್ದು, ಅಕ್ಷರಗಳನ್ನು ಓದಿ ಅರ್ಥಮಾಡಿಕೊಳ್ಳುವ ತಿಳುವಳಿಕೆ ಇರುವ ವ್ಯಕ್ತಿ ಎಂದು ನಾನು ಭಾವಿಸಿದ್ದೇನೆ. ಆದ್ದರಿಂದ ಇನ್ನೊಬ್ಬರ ಹೇಳಿಕೆಗೆ ಪ್ರತಿಕ್ರಿಯಿಸುವ ಮೊದಲು ಅದರ ಪೂರ್ಣ ಅರ್ಥವನ್ನು ತಿಳಿದುಕೊಳ್ಳುವುದು ಅವರ ಜವಾಬ್ದಾರಿಯಾಗಿದೆ. ಕೇವಲ ಕಾಂಗ್ರೆಸ್ ಪಕ್ಷದ ವಕ್ತಾರರಾಗಿ ಪಕ್ಷದ ಪರವಾಗಿ ಮಾತನಾಡುವ ಭರದಲ್ಲಿ ಸತ್ಯವನ್ನು ಮರೆಮಾಚಬಾರದು’ ಎಂದು ಸಹ ಮಾಧವ ನಾಯಕ ಅವರು ಹೇಳಿದ್ದಾರೆ.
`ನಾನು ಯಾವುದೇ ರಾಜಕೀಯ ಪಕ್ಷದ ಪರವಾಗಿಯೂ ಇಲ್ಲ, ವಿರೋಧವಾಗಿಯೂ ಇಲ್ಲ. ನಾನು ಜನಪರ ಹೋರಾಟಗಾರ. ಜನರಿಗೆ ಅನ್ಯಾಯವಾದಾಗ ಯಾವ ಸರ್ಕಾರವಿದ್ದರೂ ಪ್ರಶ್ನಿಸುವುದು ನನ್ನ ಕರ್ತವ್ಯ. ಬೇರೆ ರಾಜ್ಯಗಳ ರಾಜಕೀಯ ವಿಚಾರಗಳ ಬಗ್ಗೆ ಮಾತನಾಡುವುದಕ್ಕಿಂತ ನಮ್ಮ ರಾಜ್ಯದ ಜನರ ಸಮಸ್ಯೆಗಳ ಬಗ್ಗೆ ಮಾತನಾಡುವುದೇ ನನಗೆ ಮುಖ್ಯ’ ಎಂದವರು ಹೇಳಿದ್ದಾರೆ. `ಶಂಭು ಶೆಟ್ಟಿ ಅವರು ಹಿಂದಿನ ಬಿಜೆಪಿ ಸರ್ಕಾರದ ಅವಧಿಯನ್ನು ಒಮ್ಮೆ ನೆನಪಿಸಿಕೊಳ್ಳಲಿ. ನಾನು ಗುತ್ತಿಗೆದಾರರ ಸಂಘದ ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ ರಾಜ್ಯದಲ್ಲಿ ಕೇಳಿಬಂದ ಕಮಿಷನ್ ಆರೋಪದ ವಿರುದ್ಧ ಧ್ವನಿ ಎತ್ತಿದ್ದೆವು. ಅಂದಿನ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷರಾಗಿದ್ದ ಕೆಂಪಣ್ಣ ಅವರನ್ನು ಕರೆಸಿ, ಈ ಆರೋಪದ ವಿರುದ್ಧ ಹೋರಾಟ ಮತ್ತು ಪ್ರತಿಭಟನೆ ನಡೆಸಿದ್ದೆವು. ಅಂದು ಪ್ರಧಾನಮಂತ್ರಿಗಳ ಮಟ್ಟದಲ್ಲಿಯೂ ರಾಜ್ಯದ ಹಿಂದಿನ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಮಿಷನ್ ಆರೋಪದ ವಿಚಾರ ಚರ್ಚೆಯಾಗಿತ್ತು. ಅದೇ ರೀತಿ ಬಿಜೆಪಿ ಆಡಳಿತದ ಅವಧಿಯಲ್ಲಿ ಕಮಿಷನ್ ಆರೋಪವೂ ರಾಜ್ಯಾದ್ಯಂತ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿತ್ತು’ ಎನ್ನುವುದರ ಮೂಲಕ ಹಳೆಯ ವಿಷಯಗಳನ್ನು ನೆನಪಿಸಿದ್ದಾರೆ.
`ಶಂಭು ಶೆಟ್ಟಿ ಅವರು ನನ್ನ ಹೇಳಿಕೆಯನ್ನು ಸರಿಯಾಗಿ ಅರ್ಥಮಾಡಿಕೊಂಡು ಪ್ರತಿಕ್ರಿಯಿಸಬೇಕಿತ್ತು. ಅನಗತ್ಯವಾಗಿ ರಾಜಕೀಯ ವಿವಾದ ಸೃಷ್ಟಿಸಿ ಪಕ್ಷದ ಶಹಬ್ಬಾಸ್ಗಿರಿ ಪಡೆಯುವ ಪ್ರಯತ್ನ ಮಾಡುವುದು ಸರಿಯಲ್ಲ. ಮೊದಲು ನನ್ನ ಹೇಳಿಕೆಯನ್ನು ಮತ್ತೊಮ್ಮೆ ಪೂರ್ಣವಾಗಿ ಓದಲಿ. ಹಾಲು ಮತ್ತು ನೀರಿನ ನಡುವಿನ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳಲಿ. ನಂತರ ಬೇಕಾದರೆ ಚರ್ಚೆ ಮಾಡಲಿ’ ಎಂದು ಸವಾಲು ಹಾಕಿದ್ದಾರೆ.