`ಹಾಲಿನ ದರ ಏರಿಸುವ ಮೂಲಕ ಸರ್ಕಾರ ಹೈನುಗಾರರು ಹಾಗೂ ಗ್ರಾಹಕರ ನಡುವೆ ವೈರತ್ವ ತರುವ ಕೆಲಸ ಮಾಡುತ್ತಿದೆ’ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಮಿತಿ ಅಧ್ಯಕ್ಷ ಶಾಂತಾರಾಮ ನಾಯಕ ಅವರು ದೂರಿದ್ದಾರೆ. `ಹೈನುಗಾರಿಕೆ ಮಾಡುವವರಿಗೆ ಸೂಕ್ತ ಪ್ರೋತ್ಸಾಹ ಒದಗಿಸುವ ಬದಲು ಹಾಲಿನ ದರ ಏರಿಸಿ ಲಾಭಿಗೆ ಮಣಿದಿದೆ’ ಎಂದವರು ಕಿಡಿಕಾರಿದ್ದಾರೆ.
`ಈಗಾಗಲೇ ಅಕ್ಕಿ-ಬೇಳೆ ಬೆಲೆ ಏರಿಕೆಯಾಗಿದೆ. ಇಂಧನ ಬೆಲೆಯೂ ದುಪ್ಪಟ್ಟಾಗಿದೆ. ಜೀವನಾಗತ್ಯ ಸಾಮಗ್ರಿಗಳ ಬೆಲೆಯಲ್ಲಿ ತೀವ್ರ ಹೆಚ್ಚಳವಾಗಿದ್ದರಿಂದ ಜನ ಸಮಸ್ಯೆಗೆ ಸಿಲುಕಿದ್ದಾರೆ. ಹೀಗಿರುವಾಗ ಹೈನುಗಾರಿಕೆ ಮಾಡುವ ರೈತರ ಕಷ್ಟಕ್ಕೆ ಸ್ಪಂದಿಸಿ ಅವರಿಗೆ ಸಬ್ಸಿಡಿ ಹೆಚ್ಚಿಸುವ ಬದಲು ಸರ್ಕಾರ ಹಾಲಿನ ದರ ಏರಿಕೆ ಮಾಡಿದೆ. ಆ ಮೂಲಕ ಹಾಲಿನ ಗ್ರಾಹಕರು ಮತ್ತು ಉತ್ಪಾದಕರ ಮಧ್ಯೆ ವೈರತ್ವ ತರುವ ಕೆಲಸ ರಾಜ್ಯ ಸರಕಾರದಿಂದ ನಡೆದಿದೆ’ ಎಂದವರು ಹೇಳಿದ್ದಾರೆ.
ಇದರೊಂದಿಗೆ ಸರಕಾರಿ ಬಸ್ ದರದಲ್ಲಿ ಕನಿಷ್ಟ ರೂ 9ರೂ ಹೆಚ್ಚಳವಾಗಲಿದೆ. ಇದರಿಂದ ದೂರದ ಊರುಗಳ ಪ್ರಯಾಣವೂ ದುಬಾರಿಯಾಗಿದೆ. ರಾಜ್ಯವು ಭೀಕರ ಬರ ಎದುರಿಸುತ್ತಿದ್ದು ಅದರಿಂದ ಜನರು ಈಗಾಗಲೇ ತತ್ತರಿಸುತ್ತಿದ್ದಾರೆ. ಇದರ ಜೊತೆಗೆ ಸರಕಾರವೇ ಸಾರಿಗೆ ದರಗಳನ್ನು ಏರಿಸಿರುವುದು ಸರಿಯಲ್ಲ’ ಎಂದವರು ಹೇಳಿದ್ದಾರೆ. `ಈ ಬಗೆಯ ದರ ಏರಿಕೆ ಜನರನ್ನು ಸುಲಿಗೆ ಮಾಡುವ ಕ್ರಮವಾಗಿದ್ದು ರಾಜ್ಯ ಕಾಂಗ್ರೆಸ್ ಸರಕಾರ ಇದಕ್ಕೆ ಭಾರಿ ಬೆಲೆ ತೆರಬೇಕಾಗುತ್ತದೆ’ ಎಂದು ಸಹ ಎಚ್ಚರಿಸಿದ್ದಾರೆ. `ಮೂರು ಜನರ ಸಾರ್ವಜನಿಕ ಸಾರಿಗೆ ದರ ನಿಯಂತ್ರಣ ಸಮಿತಿಯ ಶಿಫಾರಸು ಮೇರೆಗೆ ದರ ಏರಿಕೆ ನಡೆದಿದ್ದು, ಆ ಮೂವರಿಗೆ ಬಡವರ ಬಗ್ಗೆ ಗೊತ್ತಿಲ್ಲ. ಬಡವರು ಅನುಭವಿಸುವ ಕಷ್ಟವನ್ನು ಅವರು ನೋಡಿದವರಲ್ಲ’ ಎಂದು ಕಿಡಿಕಾರಿದ್ದಾರೆ.
`ನಿಗಮಗಳಲ್ಲಿ ನಡೆಯುವ ಭ್ರಷ್ಟಾಚಾರ, ಸೋರಿಕೆ, ಅವ್ಯವಹಾರಗಳನ್ನು ತಡೆಯುವಂತಹ ಕ್ರಮಗಳನ್ನು ಗಂಭೀರವಾಗಿ ಕೈಗೊಳ್ಳಬೇಕು. ಅದು ಬಿಟ್ಟು ಹೀಗೆ ಜನರ ಮೇಲೆ ಹೊರಿಸುವ ಹೊರೆಗಳನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ. ರಾಜ್ಯ ಕಾಂಗ್ರೆಸ್ ಸರಕಾರ ಈ ಯದ್ವಾತದ್ವಾ ದರ ಪರಿಷ್ಕರಣೆ ಯನ್ನು ತಕ್ಷಣವೇ ಹಿಂತೆಗೆದುಕೊಳ್ಳಬೇಕು’ ಎಂದವರು ಒತ್ತಾಯಿಸಿದ್ದಾರೆ.