`ಬೇಡ್ತಿ-ವರದಾ ನದಿ ತಿರುವು ವಿಚಾರವಾಗಿ ರಾಜ್ಯ ಸರ್ಕಾರ ಕೈಗೊಳ್ಳುವ ನಿರ್ಣಯವೇ ಅಂತಿಮ’ ಎಂಬ ಅರ್ಥದಲ್ಲಿ ಜಲಶಕ್ತಿ ಮಂತ್ರಾಲಯವೂ ಡಾ ರವಿಕಿರಣ ಪಟವರ್ಧನ ಅವರಿಗೆ ಪತ್ರ ಬರೆದಿದೆ. ಈ ಯೋಜನೆಯ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸುವ ಕಾರ್ಯವನ್ನು ಸ್ಥಗಿತಗೊಳಿಸುವ ಅಧಿಕಾರ ಕರ್ನಾಟಕ ರಾಜ್ಯ ಸರ್ಕಾರಕ್ಕೆ ಮಾತ್ರ ಇದೆ ಎಂದು ಎಂದು ಸಹ ಆ ಪತ್ರದಲ್ಲಿ ಸ್ಪಷ್ಟಪಡಿಸಿದೆ.
ಬೇಡ್ತಿ-ವರದಾ ನದಿ ಜೋಡಣೆ ವಿಷಯವಾಗಿ ಕೆಲ ಪ್ರಶ್ನೆಗಳಿಗೆ ಉತ್ತರಿಸುವಂತೆ ಕೋರಿ ಶಿರಸಿಯ ಆಯುರ್ವೇದ ವೈದ್ಯ ಡಾ ರವಿಕಿರಣ ಪಟವರ್ಧನ ಅವರು ಪತ್ರ ಬರೆದಿದ್ದರು. ಈ ಪತ್ರವನ್ನು ಅವರು ಪ್ರಧಾನಮಂತ್ರಿ ಕಚೇರಿಯ ಸಾರ್ವಜನಿಕ ಕುಂದುಕೊರತೆ ವ್ಯವಸ್ಥೆ ಹಾಗೂ ಕೇಂದ್ರ ಜಲಶಕ್ತಿ ಸಚಿವಾಲಯಕ್ಕೆ ರವಾನಿಸಿದ್ದರು. ಅದಕ್ಕೆ ಉತ್ತರಿಸಿದ ಕೇಂದ್ರ ಸರ್ಕಾರ ಯೋಜನೆಯ ಆಡಳಿತಾತ್ಮಕ ಪ್ರಕ್ರಿಯೆ, ಕರ್ನಾಟಕ ಸರ್ಕಾರದ ಪಾತ್ರ ಹಾಗೂ ಹಣಕಾಸಿನ ಹೊಣೆಗಾರಿಕೆಯ ಕುರಿತು ಮಾಹಿತಿ ನೀಡಿದೆ. ಅದರಲ್ಲಿ ಯೋಜನೆಯ ನಿರ್ಣಾಯಕ ಪಾತ್ರ ರಾಜ್ಯ ಸರ್ಕಾರದ್ದು ಎಂದು ಉಲ್ಲೇಖಿಸಿದೆ. ಬೇಡ್ತಿ-ವರದಾ ನದಿ ಜೋಡಣೆ ಯೋಜನೆಯ ಡಿಪಿಆರ್ ಸಿದ್ಧಪಡಿಸುವ ಕಾರ್ಯವನ್ನು ಸ್ಥಗಿತಗೊಳಿಸುವಂತೆ ಹಾಗೂ ಯೋಜನೆಯ ಹಣಕಾಸಿನ ಜವಾಬ್ದಾರಿ ಯಾರ ಮೇಲಿರಲಿದೆ ಎಂಬುದರ ಬಗ್ಗೆ ಸ್ಪಷ್ಟನೆ ನೀಡುವಂತೆ ತಿಳಿಸಿದ ಪತ್ರಕ್ಕೆ ಸರ್ಕಾರ ಈ ಉತ್ತರ ನೀಡಿದೆ.
ಕರ್ನಾಟಕ ಸರ್ಕಾರದ ಜಲಸಂಪನ್ಮೂಲ ಇಲಾಖೆಯೂ ಯೋಜನೆಯ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಲು ಸಮ್ಮತಿ ನೀಡಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಈ ಒಂದು ಪ್ರಶ್ನೆಗೆ ಮಾತ್ರ ಸರ್ಕಾರ ಉತ್ತರಿಸಿದ್ದು, ಹಣಕಾಸು ವಿಷಯದ ಬಗ್ಗೆ ಮಾಹಿತಿ ಬಹಿರಂಗಪಡಿಸಿಲ್ಲ. ಯೋಜನೆ ವಿಷಯವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಪ್ಪಂದ ಮಾಡಿಕೊಂಡಿವೆ. ಆದರೆ ಯೋಜನೆ ಅನುಷ್ಠಾನಕ್ಕೆ ಬಂದಾಗ ಒಟ್ಟು ವೆಚ್ಚವನ್ನು ಯಾರು ಭರಿಸಲಿದ್ದಾರೆ? ಕೇಂದ್ರ ಸರ್ಕಾರ ಎಷ್ಟು ಅನುದಾನ ನೀಡಲಿದೆ? ಕರ್ನಾಟಕ ಸರ್ಕಾರದ ಪಾಲು ಎಷ್ಟಿರಲಿದೆ? ಯೋಜನೆಯಿಂದ ಉಂಟಾಗುವ ದೀರ್ಘಕಾಲೀನ ಆರ್ಥಿಕ ಹೊಣೆಗಾರಿಕೆ ಯಾರ ಮೇಲಿರಲಿದೆ? ಎಂಬುದಕ್ಕೆ ಉತ್ತರ ಸಿಕ್ಕಿಲ್ಲ. ಯೋಜನೆಯ ಅನುಷ್ಠಾನದ ಹಂತದಲ್ಲಿ ಮಾತ್ರ ಹಣಕಾಸು ವ್ಯವಸ್ಥೆ ಅಥವಾ ಅನುದಾನ ಹಂಚಿಕೆಯ ಮಾದರಿಯ ವಿಷಯವು ಪರಿಗಣನೆಗೆ ಬರಲಿದೆ ಎಂದು ಈ ಪತ್ರದಲ್ಲಿ ವಿವರಿಸಲಾಗಿದೆ.
.