ಶಿರಸಿ ಮಳಲಗಾಂವ್ ಬಳಿ ವಿದ್ಯುತ್ ಸಂಪರ್ಕದಿoದ ಆನೆ ಸಾವನಪ್ಪಿದ್ದು, ಊರಿಗೆ ಆನೆ ಬಂದ ಬಗ್ಗೆ ಮಾಹಿತಿಯಿದ್ದರೂ ಮೌನವಾಗಿದ್ದ ಅರಣ್ಯಾಧಿಕಾರಿಗಳಿಗೆ ಇದೀಗ ಸಂಕಷ್ಟ ಶುರುವಾಗಿದೆ. ಆನೆ ಸಾವಿನಲ್ಲಿ ಅರಣ್ಯ ಅಧಿಕಾರಿಗಳ ನಿರ್ಲಕ್ಷವಿರುವುದಾಗಿ ಅರಣ್ಯ ಸಚಿವರಿಗೆ ದೂರು ಸಲ್ಲಿಕೆಯಾಗಿದೆ.
ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಅವರು `ಆನೆ ಸಾವಿನ ವಾಸ್ತವಿಕ ಅಂಶಗಳ ಬಗ್ಗೆ ತನಿಖೆ ನಡೆಸಬೇಕು’ ಎಂದು ಆಗ್ರಹಿಸಿ ಅರಣ್ಯ ಸಚಿವ ರಾಮಲಿಂಗ ರೆಡ್ಡಿ ಅವರಿಗೆ ದೂರು ನೀಡಿದ್ದಾರೆ. `ಕಳೆದ ಮೂರು ವಾರಗಳಿಂದ ಶಿರಸಿ-ಮುಂಡಗೋಡು ಭಾಗದಲ್ಲಿ ಆನೆ ಸಂಚಾರ ಜೋರಾಗಿದೆ. ಪ್ರತಿ ವರ್ಷ ಆನೆ ಬರುತ್ತಿದ್ದರೂ ಅಧಿಕಾರಿಗಳು ಅದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಹಾಗೂ ಆನೆ ಹಾವಳಿ ನಿಯಂತ್ರಿಸುವ ಕೆಲಸ ಮಾಡಿಲ್ಲ’ ಎಂದವರು ಆಕ್ಷೇಪಿಸಿದ್ದಾರೆ.
`ನಿತ್ಯ ಆನೆ ಸಂಚಾರ ಇದ್ದರೂ ಅವುಗಳ ಬಗ್ಗೆ ಅಧಿಕಾರಿಗಳು ನಿಗಾವಹಿಸಿಲ್ಲ. ಒಂಟಿ ಆನೆ ಬೇರ್ಪಟ್ಟ ಅವಧಿಯಲ್ಲಿಯೂ ಸೂಕ್ತ ಕಾರ್ಯ ಜರುಗಿಸಿಲ್ಲ. ಹೀಗಾಗಿ ಅರಣ್ಯ ಇಲಾಖೆ ವೈಪಲ್ಯದ ಬಗ್ಗೆ ಸಮಗ್ರ ತನಿಖೆ ನಡೆಯಬೇಕು’ ಎಂವರು ದೂರಿದ್ದಾರೆ. `ಬನವಾಸಿ ವಲಯ ಅರಣ್ಯ ಕಚೇರಿ ವ್ಯಾಪ್ತಿಯಲ್ಲಿ ಈ ಅವಘಡ ನಡೆದಿದ್ದು, ತಪ್ಪಿತಸ್ಥರೆಲ್ಲರ ವಿರುದ್ಧವೂ ಕ್ರಮವಾಗಬೇಕು’ ಎಂದವರು ಆಗ್ರಹಿಸಿದ್ದಾರೆ.