ಯಲ್ಲಾಪುರ-ಮುಂಡಗೋಡು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ವಿ ಎಸ್ ಪಾಟೀಲ್ ಅವರು ಬಿಜೆಪಿಗೆ ಬರಲು ಆಸಕ್ತಿವಹಿಸಿದ್ದು, ಬನವಾಸಿ ಹೊಳೆಮಠದ ನಾಗಭೂಷಣ ಸ್ವಾಮೀಜಿ ಅವರ ಮುಂದೆಯೇ `ಬಿಜೆಪಿಯೇ ನಮಗೆ ಶತ್ರು’ ಎಂದು ಹೇಳಿದ್ದಾರೆ. `ಹೌದಾ ಇಲ್ಲವಾ?’ ಎಂದು ಅವರು ಈ ವೇಳೆ ವಿ ಎಸ್ ಪಾಟೀಲ್ ಅವರನ್ನು ಪ್ರಶ್ನಿಸಿದ್ದು, ವಿ ಎಸ್ ಪಾಟೀಲ್ ಅವರು ಅದಕ್ಕೆ ತಲೆಯಾಡಿಸಿದ್ದಾರೆ. `ಬಿಜೆಪಿಗೆ ಯಾರೂ ಮತ ಹಾಕಬೇಡಿ’ ಎಂದು ನಾಗಭೂಷಣ ಸ್ವಾಮೀಜಿ ಬಹಿರಂಗವಾಗಿ ಕರೆ ನೀಡಿದ್ದಾರೆ.
`ಭಸವ ಮಂಟಪ’ ಎಂಬ ಕೃತಿಯ ಲೇಖಕರ ನಿಲುವು ಖಂಡಿಸಿ ಶಿರಸಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ನಾಗಭೂಷಣ ಸ್ವಾಮೀಜಿ ಆರ್ ಎಸ್ ಎಸ್ ಹಾಗೂ ಬಿಜೆಪಿಗರ ವಿರುದ್ಧ ಆಕ್ರೋಶವ್ಯಕ್ತಪಡಿಸಿದ್ದಾರೆ. `ಬಸವ ತತ್ವ ಹಾಗೂ ಅಂಬೇಡ್ಕರ್ ಅವರ ಸಂವಿಧಾನವನ್ನು ನಾಶಮಾಡಿ ಮನುಸ್ಮೃತಿಯನ್ನು ಜಾರಿಗೆ ತರಲು ಪುರೋಹಿತಶಾಹಿಗಳು ಹುನ್ನಾರ ನಡೆಸುತ್ತಿದ್ದಾರೆ’ ಎಂದವರು ದೂರಿದ್ದಾರೆ. `ಸಾಕಷ್ಟು ಪ್ರಮಾಣದಲ್ಲಿ ಲಿಂಗಾಯತರಿಗೆ ಅನ್ಯಾಯವಾಗುತ್ತಿದ್ದರೂ ಪುರುಹಿತಶಾಹಿ ಹಾಗೂ ಸನಾತನಿಗಳು ಮಾತನಾಡುತ್ತಿಲ್ಲ. ರವಿ ಹಂದ ಅಂಥವರನ್ನು ಮುಂದೆ ಬಿಟ್ಟು ಲಿಂಗಾಯತರ ವಿರುದ್ಧ ಆರ್ಎಸ್ಎಸ್ ಹಾಗೂ ಬಿಜೆಪಿ ಆಟವಾಡುತ್ತಿದೆ. ಯಾವ ಲಿಂಗಾಯತರು ಬಿಜೆಪಿಗೆ ಮತ ಕೊಡಬಾರದು’ ಎಂದವರು ಆಕ್ರೋಶದಿಂದ ಹೇಳಿದ್ದಾರೆ.
`ಯಾರೂ ಬಿಜೆಪಿ ಸದಸ್ಯರಿಗೆ ಮತ ಕೊಡಬೇಡಿ’ ಎಂದು ಸ್ವಾಮೀಜಿ ಹೇಳಿದಾಗ ಪಕ್ಕದಲ್ಲಿದ್ದ ವಿ ಎಸ್ ಪಾಟೀಲ್ ಅವರು ಕಳವಳಕ್ಕೆ ಒಳಗಾದರಾದರೂ ನಂತರ ಸ್ವಾಮೀಜಿ ಅವರನ್ನೇ ಈ ಬಗ್ಗೆ ಪ್ರಶ್ನಿಸಿದ್ದಾರೆ. ಆಗ, ವಿ ಎಸ್ ಪಾಟೀಲ್ ಅವರು ತಮ್ಮ ತಲೆ ಅಲ್ಲಾಡಿಸಿ `ಮಾತು ಮುಂದುವರೆಸಿ’ ಎಂಬರ್ಥದಲ್ಲಿ ಸನ್ನೆ ಮಾಡಿದ್ದಾರೆ. ಮುಂದುವರೆದು ಮಾತನಾಡಿದ ಸ್ವಾಮೀಜಿ `ಈ ದೇಶದಲ್ಲಿ ವಾಸಿಸುವ ದೃಷ್ಟಿಯಿಂದ ಮುಸಲ್ಮಾನರು, ಕ್ರೈಸ್ತರು, ಲಿಂಗಾಯತರು ಸೇರಿದಂತೆ ಪ್ರತಿಯೊಬ್ಬರೂ ಹಿಂದೂಗಳೇ ಆಗಿದ್ದಾರೆ. ಆದರೆ, ಧಾರ್ಮಿಕವಾಗಿ ನಾವು ಹಿಂದೂಗಳಲ್ಲ. ಲಿಂಗಾಯತ ಎಂಬುದು ಸ್ವತಂತ್ರ ಧರ್ಮವಾಗಿದ್ದು, ನಾವು ಚಾತುರ್ವರ್ಣ ವ್ಯವಸ್ಥೆ ಅಥವಾ ಮನುಸ್ಮೃತಿಯ ವ್ಯಾಪ್ತಿಗೆ ಬರುವುದಿಲ್ಲ’ ಎಂದು ಹೇಳಿದ್ದಾರೆ. `ಲಿಂಗಾಯತ ಧರ್ಮವನ್ನು ನಾಶಮಾಡುವ ಸಂಚು ನಡೆಯುತ್ತಿದೆ’ ಎಂದವರು ಆಕ್ರೋಶವ್ಯಕ್ತಪಡಿಸಿದ್ದಾರೆ.
`ಬಸವ ತತ್ವ ಹಾಗೂ ಅಂಬೇಡ್ಕರ್ ಅವರ ಸಂವಿಧಾನವನ್ನು ನಾಶಮಾಡಿ ಮನುಸ್ಮೃತಿಯನ್ನು ಜಾರಿಗೆ ತರಲು ಪುರೋಹಿತಶಾಹಿಗಳು ಹುನ್ನಾರ ನಡೆಸುತ್ತಿದ್ದಾರೆ. ಪುರುಷರಷ್ಟೇ ಸಮಾನವಾಗಿ ಮಹಿಳೆಯರಿಗೂ ಸಂಸ್ಕಾರ ದೊರಕುವಂತೆ ಮಾಡಿದ್ದು ಮತ್ತು ಮಹಿಳೆಯರು ಸ್ವತಂತ್ರವಾಗಿ ಬದುಕುವಂತಾಗಲು ಕಾರಣರಾದವರು ಬಸವಣ್ಣನವರಾಗಿದ್ದಾರೆ. ಈ ಹಿಂದೆ ಬ್ರಾಹ್ಮಣಶಾಹಿಯಲ್ಲಿ ಹೆಣ್ಣುಮಕ್ಕಳು, ಹೆಂಡತಿ ಮತ್ತು ತಾಯಿಯನ್ನು ಶೂದ್ರರೆಂದು ಪರಿಗಣಿಸಲಾಗುತ್ತಿತ್ತು. ಎಂಟನೇ ವಯಸ್ಸಿನಲ್ಲಿ ಜನಿವಾರ ಹಾಕಿ ಬ್ರಾಹ್ಮಣತ್ವ ಪ್ರಾಪ್ತಿಯಾಗುತ್ತದೆ ಎಂದು ಬಂದಾಗ, ನನ್ನ ಹೆತ್ತ ತಾಯಿಯೇ ಶೂದ್ರಳಾದರೆ ನಾನು ಹೇಗೆ ಬ್ರಾಹ್ಮಣನಾಗುತ್ತೇನೆ? ಆ ಸಂಸ್ಕಾರವನ್ನು ನನ್ನ ತಾಯಿ ಮತ್ತು ಅಕ್ಕನಿಗೆ ಕೊಡಿ ಎಂದು ಬಸವಣ್ಣನವರು ದೃಢವಾಗಿ ಹೇಳಿದ್ದರು’ ಎಂಬ ಅಂಶದ ಬಗ್ಗೆಯೂ ಸ್ವಾಮೀಜಿ ಮಾತನಾಡಿದ್ದಾರೆ.