ವಜ್ರಳ್ಳಿ-ಹೊನಗದ್ದೆಯ ಗಿರೀಶ ಭಟ್ಟ ಅವರ ಮನೆಯಲ್ಲಿದ್ದ ಎರಡು ಹಂಡೆ ಕಾಣೆಯಾಗಿದೆ. ತಾಮ್ರದ ಹಂಡೆಯ ಜೊತೆ ತಂಬಿಗೆ, ದಳ್ಳೆ, ದೀಪ, ಜಗಟೆ, ಸೌಟು, ಕುಕ್ಕರ್, ನಾನ್ ಸ್ಟಿಕ್ ತವಾವನ್ನು ಬಿಡದೇ ಕಳ್ಳರು ದೋಚಿದ್ದಾರೆ.
ಯಲ್ಲಾಪುರದ ವಜ್ರಳ್ಳಿ ಹೊನಗದ್ದೆಯ ಗಿಡಗಾರಿ ಗಿರೀಶ ಶಂಕರ ಭಟ್ಟ (ಮಂಜುನಾಥ) ಅವರು ವಾಸವಾಗಿದ್ದಾರೆ. 41 ವರ್ಷದ ಅವರು ಪುರೋಹಿತರಾಗಿ ಬದುಕು ಕಟ್ಟಿಕೊಂಡಿದ್ದಾರೆ. ಸದ್ಯ ಯಲ್ಲಾಪುರದ ಅಜ್ಜಪ್ಪನಕೆರೆ ದೇವಸ್ಥಾನ ಪಕ್ಕದಲ್ಲಿ ಅವರು ವಾಸವಾಗಿದ್ದಾರೆ. ಸೆಪ್ಟೆಂಬರ್ 3ರಂದು ಸಂಜೆ ಅವರು ಹೊನಗದ್ದೆಯ ಗಿಡಗಾರಿಯಲ್ಲಿರುವ ಮನೆಗೆ ಹೋಗಿದ್ದು, ಅಲ್ಲಿದ್ದ ತಾಮ್ರ-ಹಿತ್ತಾಳೆ ಹಾಗೂ ಆಲ್ಯುಮಿನಿಯಂ ಸಾಮಗ್ರಿಗಳೆಲ್ಲವೂ ಸುರಕ್ಷಿತವಾಗಿರುವುದನ್ನು ನೋಡಿದ್ದಾರೆ. ಆದರೆ, ನವೆಂಬರ್ 1ರಂದು ಅವರು ಮತ್ತೆ ಮನೆಗೆ ಹೋಗಿ ನೋಡಿದಾಗ ಅದೆಲ್ಲವೂ ಕಳ್ಳರ ಪಾಲಾಗಿರುವುದು ಗಮನಕ್ಕೆ ಬಂದಿದೆ.
ಮನೆ ಹಿಂದಿನ ಚಿಲಕ ತೆಗೆದು ಒಳಗೆ ನುಗ್ಗಿದ ಕಳ್ಳರು ದೊಡ್ಡ ದೊಡ್ಡದ ಎರಡು ತಾಮ್ರದ ಹಂಡೆ ಕಬಳಿಸಿದ್ದಾರೆ. ಜೊತೆಗೆ ಅಲ್ಲಿದ್ದ ಕಡಬು ಮಾಡುವ ದಳ್ಳೆಯನ್ನು ದೋಚಿದ್ದಾರೆ. 8 ತಾಮ್ರದ ತೋಪು, ತಾಮ್ರದ ರಂಗೋಲಿ ತೋಪು, ದೇವರ ಮುಂದಿದ್ದ ಹಿತ್ತಾಳೆಯ ಜಗಟೆಯನ್ನು ಕಳ್ಳರು ತಮ್ಮದಾಗಿಸಿಕೊಂಡಿದ್ದಾರೆ. ಇದರೊಂದಿಗೆ 250 ತಾಮ್ರದ ತಂಬಿಗೆ ಹಾಗೂ 250 ಹಿತ್ತಾಳೆ ತಂಬಿಗೆಯನ್ನು ಕದ್ದಿದ್ದಾರೆ. 30 ಹಿತ್ತಾಳೆ ದೀಪ, 21 ಹಿತ್ತಾಳೆಯ ಸೌಟುಗಳನ್ನು ಕಣ್ಮರೆ ಮಾಡಿದ್ದಾರೆ.
ಅಡುಗೆ ಮನೆಗೆ ನುಗ್ಗಿದ ಕಳ್ಳರು ಅಲ್ಲಿದ್ದ ಕುಕ್ಕರ್ ಸಹ ಬಿಟ್ಟಿಲ್ಲ. ಗ್ಯಾಸ್ ಒಲೆಯ ಮೇಲಿದ್ದ ಬರ್ನರ್ ಜೊತೆ ನಾನ್ ಸ್ಟಿಕ್ ತವಾವನ್ನು ಎಗರಿಸಿ ಪರಾರಿಯಾಗಿದ್ದಾರೆ. ಕಾಣೆಯಾದ ಎಲ್ಲಾ ವಸ್ತುಗಳ ಪಟ್ಟಿ ಬರೆದ ಭಟ್ಟರು ಒಟ್ಟು 143 ಕೆಜಿ ತಾಮ್ರ ಹಾಗೂ 58 ಕೆಜಿ ಹಿತ್ತಾಳೆ ಸೇರಿ 83 ಸಾವಿರ ರೂ ಮೌಲ್ಯದ ಸಾಮಗ್ರಿ ಕಾಣೆಯಾದ ಬಗ್ಗೆ ದೂರಿದ್ದಾರೆ.