ಶಿರಸಿಯ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಗಂಗಾಧರೇoದ್ರ ಸರಸ್ವತೀ ಮಹಾಸ್ವಾಮಿಗಳವರ 59ನೇ ವರ್ಧಂತಿ ಉತ್ಸವ ಮಂಗಳವಾರ ನಡೆದಿದ್ದು, ಶ್ರದ್ಧಾ-ಭಕ್ತಿಯಿಂದ ಸೇವಾ ಚಟುವಟಿಕೆಗಳು ನಡೆದಿದೆ. ಉತ್ಸವದ ಅಂಗವಾಗಿ ಮಹಾಸಂಸ್ಥಾನದ ಸುಧರ್ಮ ಸಭಾಭವನದಲ್ಲಿ ಆಯೋಜಿಸಿದ್ದ ಉಚಿತ ರಕ್ತದಾನ ಹಾಗೂ ಆರೋಗ್ಯ ತಪಾಸಣಾ ಶಿಬಿರದಲ್ಲಿ ನೂರಾರು ಜನ ಭಾಗವಹಿಸಿದ್ದಾರೆ.
ಗ್ರಾಮಾಭ್ಯುದಯ, ಟಿ ಎಸ್ ಎಸ್ ಶ್ರೀಪಾದ ಹೆಗಡೆ ಕಡವೆ ವೈದ್ಯಕೀಯ ವಿಜ್ಞಾನ ಸಂಸ್ಥೆ, ಪಂಡಿತ ಸಾರ್ವಜನಿಕ ಆಸ್ಪತ್ರೆ, ತಾಲೂಕು ಆರೋಗ್ಯ ಇಲಾಖೆ, ಸೇವಾ ಸಹಕಾರಿ ಸಂಘದ ಸಹಕಾರದಲ್ಲಿ ಈ ಶಿಬಿರ ನಡೆದಿದೆ. ಡಾ ವೀರೇಶ್ ಎಸ್ ಬಾಲೆಹೊಸೂರು, ಡಾ ವೀಣಾ ವೆರ್ಣೇಕರ್, ಡಾ ಸುಮನ್ ಹಾಗೂ ಇತರ ತಜ್ಞ ವೈದ್ಯರು ಆರೋಗ್ಯ ತಪಾಸಣೆ ನಡೆಸಿದ್ದಾರೆ. ರೋಗಿಗಳಿಗೆ ಅವರೆಲ್ಲರೂ ಅಗತ್ಯ ವೈದ್ಯಕೀಯ ಸಲಹೆ ನೀಡಿದ್ದಾರೆ. ವರ್ಧಂತಿ ಉತ್ಸವದ ಅಂಗವಾಗಿ ಅಥರ್ವಶೀರ್ಷ ಪಾರಾಯಣ, ಮಹಾಗಣಪತಿ ಹವನ, ಶ್ರೀಸೂಕ್ತ-ಪುರುಷಸೂಕ್ತ ಪಾರಾಯಣ, ಮಹಾಮೃತ್ಯುಂಜಯ ಜಪ, ಗ್ರಹಶಾಂತಿ, ಆಯುಷ್ಯಚರು ಶಾಂತಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದಿವೆ. ವೇದಮೂರ್ತಿ ಕೃಷ್ಣ ಜೋಶಿ, ವೇ ಮೂ ಚಿನ್ಮಯ ಜೋಶಿ ಹಾಗೂ ಇತರ 50ಕ್ಕೂ ಅಧಿಕ ಋತ್ವಿಜರು ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ಯಾಗಶಾಲೆಯಲ್ಲಿ ನಡೆದ ಪೂಜಾ-ಹವನಾದಿ ಧಾರ್ಮಿಕ ವಿಧಿವಿಧಾನಗಳಿಗೂ ಭಕ್ತರು ಸಾಕ್ಷಿಯಾಗಿದ್ದಾರೆ.
ಸಂಜೆ ನಡೆದ ಸಾಂಸ್ಕೃತಿಕ ಹಾಗೂ ಭಕ್ತಿ ಸಂಗೀತ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕಿಯರಾದ ರಾಧಾ ದೇಸಾಯಿ ಹಾಗೂ ಅನುರಾಧಾ ಭಟ್ ಭಕ್ತಿಗೀತೆಗಳನ್ನು ಪ್ರಸ್ತುತಪಡಿಸಿದ್ದಾರೆ. ಅವರಿಗೆ ಪ್ರಕಾಶ ಹೆಗಡೆ ಹಾಗೂ ಎಂ ಜಿ ಭಟ್ಟ ಸಾಥ್ ನೀಡಿದ್ದಾರೆ. ಗ್ರಾಮಾಭ್ಯುದಯದ ಅಧ್ಯಕ್ಷ ರಾಮಚಂದ್ರ ಹೆಗಡೆ ಕಂಚನಳ್ಳಿ, ಕಾರ್ಯದರ್ಶಿ ಸಂತೋಷ ಭಟ್ಟ ಕೋಡಿಗಾರ, ಹೇಮಂತ ಹೆಗಡೆ, ಎಂ ಸಿ ಹೆಗಡೆ ಶಿರಸಿಮಕ್ಕಿ, ಆರ್ ಎನ್ ಹೆಗಡೆ ಉಳ್ಳಿಕೊಪ್ಪ, ಸುರೇಶ ಹಕ್ಕಿಮನೆ, ಎಂ ಕೆ.ಹೆಗಡೆ ಗೋಳಿಕೊಪ್ಪ, ಶ್ರೀಧರ ಭಟ್ ಕಳವೆ, ಆರ್ ಎನ್ ಭಟ್ಟ ಸುಗಾವಿ ಈ ಎಲ್ಲಾ ಕಾರ್ಯಕ್ರಮ ಉಸ್ತುವಾರಿ ನೋಡಿದ್ದಾರೆ.