ಮುಕ್ತಿ ಕ್ಷೇತ್ರ ಎಂದು ಭಾವಿಸಲಾದ ಗೋಕರ್ಣದಲ್ಲಿ ಅತಿ ಹೆಚ್ಚು ಸಾವು-ನೋವು ಸಂಭವಿಸುತ್ತಿದ್ದು, ಅಲ್ಲಿನ ಶವಾಗಾರದ ದುಸ್ಥಿತಿಯಿಂದಾಗಿ `ಸತ್ತರೂ ಸುಖವಿಲ್ಲ’ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ.
ಗೋಕರ್ಣದಲ್ಲಿ ಈಚೆಗೆ ಅಪಘಾತ, ಸಮುದ್ರ ಅವಘಡ ಸಾಮಾನ್ಯವಾಗಿದೆ. ಗಾಯಗೊಂಡವರಿಗೆ ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತುರ್ತು ಚಿಕಿತ್ಸೆ ನೀಡಲಾಗುತ್ತದೆ. ಆದರೆ, ಸಾವನಪ್ಪಿದವರಿಗೆ ಮರಣೋತ್ತರ ಪರೀಕ್ಷೆಗೆ ಸಮಸ್ಯೆ ಆಗುತ್ತಿದೆ. ಪ್ರಸಿದ್ಧ ಪ್ರವಾಸಿ ಹಾಗೂ ಪುಣ್ಯಕ್ಷೇತ್ರವಾದ ಗೋಕರ್ಣದಲ್ಲಿ ಈಚೆಗೆ ಸಮುದ್ರ ಸ್ನಾನ, ಸೆಲ್ಪಿ ಹುಚ್ಚಿಗೆ ಸಾವನಪ್ಪುವವರ ಸಂಖ್ಯೆ ಹೆಚ್ಚಾಗಿದೆ. ವಾರ್ಷಿಕ ಸರಿ ಸುಮಾರು 40 ಶವ ಪರೀಕ್ಷೆ ಇಲ್ಲಿ ನಡೆಯುತ್ತಿದ್ದು, ಶವಪರೀಕ್ಷೆಗೆ ಸಾಹಸ ಮಾಡಬೇಕಾದ ಅನಿವಾರ್ಯ ಸೃಷ್ಠಿಯಾಗಿದೆ. ಶವಾಗಾರದ ಹಳೆಯ ಕಟ್ಟಡ ಸರಿಯಾಗಿಲ್ಲ. ಹೊಸ ಕಟ್ಟಡ ಪೂರ್ಣವಾಗಿಲ್ಲ ಎಂಬ ತೊಂದರೆ ಇಲ್ಲಿ ಕಾಡುತ್ತಿದೆ.
ಮೂರು ವರ್ಷಗಳ ಹಿಂದೆ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೇಗೇರಿಸಲು ಸರ್ಕಾರದಿಂದ ಹಣ ಮಂಜೂರಾಗಿ ನೂತನ ಕಟ್ಟಡ ನಿರ್ಮಾಣಕ್ಕೆ ಅಡಿಗಲ್ಲು ಹಾಕಲಾಗಿತ್ತು, ಇದರ ಪರಿಣಾಮ ಹಳೆ ಕಟ್ಟಡ ಸಂಪೂರ್ಣ ನೆಲಸಮಗೊಳಿಸಲಾಯಿತು. ಈ ವೇಳೆ ಶವಾಗಾರದ ವಿದ್ಯುತ್ ಸಂಪರ್ಕ ಹಾಗೂ ನೀರಿನ ಪೂರೈಕೆ ಕಡಿತಗೊಂಡಿತ್ತು. ವೈದ್ಯಕೀಯ ಸೇವೆಯನ್ನು ದಾನಿಗಳ ನೆರವಿನಿಂದ ಕಟ್ಟಿದ ಹೊರರೋಗಿಗಳ ವಿಭಾಗದ ಕಟ್ಟಡದಲ್ಲಿ ಶುರು ಮಾಡಲಾಯಿತು. ಈ ವೇಳೆ ಮರಣೋತ್ತರ ಪರೀಕ್ಷಾ ಕೊಠಡಿಗೆ ವಿದ್ಯುತ್ ಸಂಪರ್ಕ ನೀಡಲಾಗಿದ್ದು, ನೀರಿನ ಪೈಪ್ ಲೈನ್ ಸಮಸ್ಯೆ ಹಾಗೇ ಇದೆ.
ಇನ್ನೂ ಗುಡ್ಡದ ಮೇಲಿರುವ ಶವ ಪರೀಕ್ಷೆ ಕಟ್ಟಡಕ್ಕೆ ತೆರಳಲು ಸಾಹಸ ಅನಿವಾರ್ಯ. ಆಧುನಿಕ ಪದ್ದತಿಯಲ್ಲಿನ ಹಲವು ಸೌಕರ್ಯಗಳು ಇಲ್ಲಿಲ್ಲ. ನೂತನವಾಗಿ ಶವಾಗಾರದ ಕಟ್ಟಡವನ್ನ ಆರೋಗ್ಯ ಕೇಂದ್ರದಲ್ಲಿ ನಿರ್ಮಿಸಲಾಗಿದ್ದು, ಕೆಲಸ ನಿಧಾನಗತಿಯಲ್ಲಿ ಸಾಗುತ್ತಿದೆ. ಇದನ್ನ ಶೀಘ್ರವಾಗಿ ಪೂರ್ಣಗೊಳಿಸಿ ಬಳಕೆ ಮಾಡಬೇಕು ಎಂಬ ಆಗ್ರಹ ಕೇಳಿಬಂದಿದೆ. ಸದ್ಯ ಪ್ರವಾಸಿಗರು ಆಕಸ್ಮಿಕ ಸಾವನ್ನಪ್ಪಿದಾಗ ದೂರದ ಊರಿವ ಕುಟುಂಬದವರು ಇಲ್ಲಿ ಬರಲು ಒಂದೆರಡು ದಿನ ಬೇಕಾಗುತ್ತಿದ್ದು, ಅಲ್ಲಿಯವರೆಗೆ ಶವ ಕಾದಿಡಲು ಇಲ್ಲಿ ವ್ಯವಸ್ಥೆ ಇಲ್ಲ.
ಜೊತೆಗೆ ಮರಣೋತ್ತರ ಪರೀಕ್ಷೆ ನಡೆಸುವಾಗ ಗ್ರಾಮ ಪಂಚಾಯತ ಸ್ವಚ್ಚತಾ ಸಿಬ್ಬಂದಿಯನ್ನು ಬಳಸಿಕೊಳ್ಳಲಾಗುತ್ತದೆ. ಅನುಭವಿ ಸಿಬ್ಬಂದಿ ಕೊರತೆ ಆಸ್ಪತ್ರೆಗೆ ಕಾಡುತ್ತಿದೆ. ತುರ್ತು ಸಂದರ್ಭದಲ್ಲಿ ಇಲ್ಲಿನ ಆಡಳಿತ ವೈದ್ಯಾಧಿಕಾರಿಗಳೇ ಎಲ್ಲವನ್ನು ಮಾಡಬೇಕಾದ ಪರಿಸ್ಥಿತಿಯಿದೆ.