ಅಡ್ಡಾದಿಡ್ಡಿ ಟಿಪ್ಪರ್ ಓಡಿಸುವ ಶಿರಸಿ ಕೂರ್ಸೆ ಬಳಿಯ ಗೋಪಾಲ ಗೌಡ ಅವರು ಕಳೆದ ತಿಂಗಳು ಬೈಕಿಗೆ ಟಿಪ್ಪರ್ ಗುದ್ದಿದ್ದು, ಆ ಅಪಘಾತದಲ್ಲಿ ಗಾಯಗೊಂಡಿದ್ದ ದೊಡ್ನಳ್ಳಿ ಬಳಿಯ ಉಲ್ಲಾಸ್ ಆರೇರ್ ಅವರು ಸಾವನಪ್ಪಿದ್ದಾರೆ. ಒಂದು ತಿಂಗಳ ಕಾಲ ಅವರನ್ನು ಆಸ್ಪತ್ರೆಯಲ್ಲಿರಿಸಿಕೊಂಡರೂ ಅದರಿಂದ ಯಾವ ಪ್ರಯೋಜನವೂ ಆಗಲಿಲ್ಲ.
ಶಿರಸಿಯ ದೊಡ್ನಳ್ಳಿ ಬಳಿಯ ಬಿಕ್ಕನಳ್ಳಿಯಲ್ಲಿ ಉಲ್ಲಾಸ್ ಸಣ್ಯ ಆರೇರ್ ಅವರು ವಾಸವಾಗಿದ್ದರು. ಈಗಿನ್ನೂ 27 ವರ್ಷದ ಅವರು ಮೇ 27ರಂದು ಮಂಜಗುಣಿಯಿoದ ಶಿರಸಿ-ಕುಮಟಾ ಮಾರ್ಗವಾಗಿ ಬೈಕ್ ಓಡಿಸುತ್ತಿದ್ದರು. ಅದೇ ದಾರಿಯಲ್ಲಿ ಶಿರಸಿ ಕಲ್ಲಕಂಟ ಕೂರ್ಸೆಯ ಗೋಪಾಲ ಮಹಾಬಲೇಶ್ವರ ಗೌಡ ಅವರು ಟಿಪ್ಪರ್ ಓಡಿಸಿಕೊಂಡು ಬಂದರು. ಅತ್ಯಂತ ವೇಗವಾಗಿ ಬಂದ ಟಿಪ್ಪರ್ ಉಲ್ಲಾಸ್ ಆರೇರ್ ಅವರ ಬೈಕಿಗೆ ಡಿಕ್ಕಿ ಹೊಡೆಯಿತು. ಹಿಂದಿನಿoದ ಟಿಪ್ಪರ್ ಗುದ್ದಿದ ಪರಿಣಾಮ ಉಲ್ಲಾಸ್ ಆರೇರ್ ಅವರು 10 ಅಡಿಯವರೆಗೆ ರಸ್ತೆ ಮೇಲೆ ಉಜ್ಜಿಕೊಂಡು ಹೋದರು. ಗಂಭೀರ ಪ್ರಮಾಣದಲ್ಲಿ ಗಾಯಗೊಂಡರು.
ಈ ಅಪಘಾತ ನೋಡಿದ ಜನ ಉಲ್ಲಾಸ್ ಆರೇರ್ ಅವರನ್ನು ಶಿರಸಿ ಪಂಡಿತ್ ಆಸ್ಪತ್ರೆಗೆ ದಾಖಲಿಸಿದರು. ನಂತರ ಕುಟುಂಬದವರು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್’ಗೆ ಕರೆದೊಯ್ದರು. ಒಂದು ತಿಂಗಳ ಕಾಲ ವೈದ್ಯರು ಅವರಿಗೆ ಆರೈಕೆ ಮಾಡಿದರು. ಕುಟುಂಬದವರು ಸಹ ಉಲ್ಲಾಸ್ ಆರೇರ್ ಅವರನ್ನು ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನಿಸಿದರು. ಆದರೆ, ಅದು ಪ್ರಯೋಜನಕ್ಕೆ ಬರಲಿಲ್ಲ. ನಿನ್ನೆ ಉಲ್ಲಾಸ್ ಆರೇರ್ ಅವರ ತಂಗಿ ನೇತ್ರಾವತಿ ಆರೇರ್ ಅವರು ಸಾವಿನ ಸುದ್ದಿ ಹೇಳಲು ಪೊಲೀಸರಿಗೆ ಫೋನ್ ಮಾಡಿದರು. ದೊಡ್ನಳ್ಳಿಯ ಅಭಿಷೇಕ ಮಧುಕೇಶ್ವರ ಆರೇರ್ ಅವರು ಈ ಮೊದಲು ಅಪಘಾತದ ಬಗ್ಗೆ ಮಾಹಿತಿ ನೀಡಿದ್ದು, ಅದೇ ಆಧಾರದಲ್ಲಿ ಪೊಲೀಸರು ಟಿಪ್ಪರ್ ಚಾಲಕ ಗೋಪಾಲ ಗೌಡ ಅವರ ವಿರುದ್ಧ ಕ್ರಮ ಜರುಗಿಸಿದರು.