ದೇವರ ಹೆಸರಲ್ಲೆ ಇರಬೇಕು ದೇವಸ್ಥಾನದ ಜಾಗ
ದೇವಸ್ಥಾನದ ಭೂಮಿ ಕಬಳಿಕೆ, ಆಸ್ತಿಗೆ ಸಂಬಂಧಿಸಿದ ವ್ಯಕ್ತಿಗತ ವ್ಯಾಜ್ಯಗಳು ಸೃಷ್ಟಿಯಾಗುವುದನ್ನು ತಡೆಯಲು ರಾಜ್ಯ ಸರಕಾರ ಬಿಗಿ ಕ್ರಮಕ್ಕೆ ಮುಂದಾಗಿದೆ. ದೇವಸ್ಥಾನದ ಜಮೀನುಗಳಿಗೆ ದೇವರ ಹೆಸರಿನಲ್ಲಿಯೇ ರಕ್ಷಣೆ ನೀಡಲು ಕೆಲಸ ಆರಂಭಿಸಲಾಗಿದೆ. ಮುಜರಾಯಿ ಇಲಾಖೆಗೆ ಸೇರಿದ ದೇವಸ್ಥಾನದ ಜಮೀನುಗಳಿಗೆ ಈ ಮೂಲಕ ತಾಂತ್ರಿಕ ಭದ್ರತೆ ಒದಗಿಸಲಾಗುತ್ತಿದೆ.
ದೇವಸ್ಥಾನಗಳಿಗೆ ಸರಕಾರದಿಂದ ಮಂಜೂರು ಮಾಡಿದ ಜಮೀನುಗಳ ದಾಖಲೆಯಲ್ಲಿ ಯಾವುದೇ ವ್ಯಕ್ತಿಯ ಹೆಸರು ಇದ್ದರೂ ಅದನ್ನು ತೆಗೆದು ದೇವಸ್ಥಾನದ ಹೆಸರು ದಾಖಲಿಸಲಾಗುತ್ತದೆ. ಜತೆಗೆ ಮುಂದೆ ಯಾವುದೇ ರೀತಿಯಲ್ಲಿ ದೇವಸ್ಥಾನದ ಹೆಸರಿನ ಜಮೀನನ್ನು (ನಿರ್ಬಂಧ) ಮಾಡಲಾಗುತ್ತದೆ.
ಒಟ್ಟು 34,566 ದೇವಸ್ಥಾನ, 105 ಕೋಟಿ ರೂ. ಆದಾಯ ಬರುತ್ತಿದೆ. ರಾಜ್ಯದಲ್ಲಿ ಮುಜರಾಯಿ ಇಲಾಖೆಯ ಅಧೀನದಲ್ಲಿ ಎ, ಬಿ, ಸಿ ದರ್ಜೆ ಒಟ್ಟು 34,566 ದೇವಸ್ಥಾನಗಳು ಇವೆ. ಈ ದೇವಸ್ಥಾನಗಳಲ್ಲಿ ವರ್ಷಕ್ಕೆ 105 ಕೋಟಿ ರೂ.ವರೆಗೆ ಆದಾಯ ಸಂಗ್ರಹ ಆಗುತ್ತಿದೆ. ಅದರಲ್ಲಿ ಅನೇಕ ಕಡೆ ದೇವಸ್ಥಾನದ ಜಮೀನು ದಾಖಲೆಗಳಲ್ಲಿ ಮೊತ್ತೇಸರರು, ಪೂಜಾರಿಗಳ ಹೆಸರು ಇದೆ. ಅಂಥ ಕೆಲವೆಡೆ ಜಮೀನು ವ್ಯಾಜ್ಯಗಳು, ಪರಭಾರೆ ಯತ್ನ ನಡೆಯಬಾರದು ಎಂದು ಪಹಣಿಯಲ್ಲಿ ದೇವಸ್ಥಾನದ ಹೆಸರು ಮಾತ್ರ ಉಳಿಸಲಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಸ್ಥಳೀಯ ಮಂಡಳಿ, ಖಾಸಗಿಯಾಗಿ ನಡೆಯುವ ದೇವಸ್ಥಾನಗಳಿಗೆ ಇದು ಅನ್ವಯಿಸುವುದಿಲ್ಲ.
ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಸ್ಥಾನಗಳಿಗೆ ಮಾತ್ರ ಅನ್ವಯ ಎಂದು ಅಧಿಕಾರಿಗಳು ಸ್ಪಷ್ಟಪಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಮುಜರಾಯಿ ಇಲಾಖೆಯಡಿ 662 ದೇವಸ್ಥಾನಗಳು ಇದ್ದು, ಅನೇಕ ದೇವಸ್ಥಾನಗಳ ಆಸ್ತಿ ದಾಖಲೆಯಲ್ಲಿ ಮೊತ್ತೇಸರರ ಬಿಟ್ಟು ದೇವಸ್ಥಾನದ ಹೆಸರು ದಾಖಲಿಸಲಾಗಿದೆ. ಇರುವ ಸರಕಾರಿ ಜಮೀನು ಪ್ಲಾಗ್ ಮಾಡುವ ಸಂಬಂಧ ಕಂದಾಯ ಇಲಾಖೆಯಿಂದ ಪ್ರಕ್ರಿಯೆ ಆರಂಭವಾಗಿದೆ. ಸರಕಾರಿ ಜಮೀನು ದುರುಪಯೋಗ ಆಗಬಾರದು, ಪರಭಾರೆ ಆಗಬಾರದು ಎಂದು ಪ್ಲಾಗ್ ಮಾಡಲು ಗವರ್ನಮೆಂಟ್ ಲ್ಯಾಂಡ್ ಮ್ಯಾಪಿಂಗ್ ಟೂಲ್‌ನಲ್ಲಿ ಅವಕಾಶ ನೀಡಲಾಗಿದೆ.
ಹಾಗಾಗಿ ಯಾವ ದೇವಸ್ಥಾನಗಳು ಸರಕಾರಿ ಜಮೀನಿನಲ್ಲಿವೆ, ಖಾಸಗಿ ಜಮೀನುಗಳಲ್ಲಿ ಎಷ್ಟು ದೇವಸ್ಥಾನಗಳು ಇವೆ ಎಂದು ಕಂದಾಯ ಇಲಾಖೆ ಆಯುಕ್ತರಿಂದ ಎಲ್ಲ ಜಿಲ್ಲೆಗಳ ಮಾಹಿತಿ ಕೇಳಲಾಗಿದೆ. ಆಯಾ ಗ್ರಾಮ ಲೆಕ್ಕಾಧಿಕಾರಿ ಮೂಲಕ ದೇವಸ್ಥಾನಗಳ ಆಸ್ತಿ ದಾಖಲೆ ಮಾಹಿತಿ ಸಂಗ್ರಹಿಸಲಾಗುತ್ತಿದೆ.