ತಾಯಿಗೆ ಔಷಧಿ ತರುವುದಕ್ಕಾಗಿ ಶಿರಸಿ TSS ಆಸ್ಪತ್ರೆಗೆ ಹೊರಟಿದ್ದ ಅಂಕೋಲಾ ಕುಂಟಕಣಿಯ ಶ್ರೀದೇವಿ ಗೌಡ ಅವರು ದಿಢೀರ್ ಆಗಿ ಕಾಣೆಯಾಗಿದ್ದು, ಸದ್ಯ ಅವರು ತಮ್ಮ ಪ್ರಿಯತಮನ ಜೊತೆ ಪ್ರತ್ಯಕ್ಷವಾಗಿದ್ದಾರೆ. `ಇಲ್ಲೇ ಹೋಗಿ ಬರುವೆ’ ಎಂದು ಹೇಳಿ ಕಣ್ಮರೆಯಾಗಿದ್ದ ಕೇಣಿಯ ಸಾಕ್ಷಿ ಚೋಡಣಕರ್ ಅವರು ಸಹ ಪ್ರೀತಿಸಿದ ಹುಡುಗನ ಜೊತೆ ಸಪ್ತಪದಿ ತುಳಿದಿದ್ದಾರೆ.
ಅಂಕೋಲಾ ತಾಲೂಕಿನ ಕೇಣಿ ಗಾಬಿತವಾಡಾದ ಸಾಕ್ಷಿ ಸೂರ್ಯಕಾಂತ ಚೋಡಣಕರ (19) ಅವರು ಜೂನ್ 23ರಂದು ಕಾಣೆಯಾಗಿದ್ದರು. ಮಧ್ಯಾಹ್ನ ಮನೆಯಿಂದ ಹೊರಗೆ ಹೋದ ಅವರು ಮರಳಿ ಮನೆಗೆ ಬಂದಿರಲಿಲ್ಲ. ಇದರಿಂದ ಆತಂಕಕ್ಕೆ ಒಳಗಾದ ಕುಟುಂಬದವರು ಎಲ್ಲಾ ಕಡೆ ಹುಡುಕಾಟ ನಡೆಸಿದರು. ಆದರೆ, ಎಲ್ಲಿಯೂ ಸಾಕ್ಷಿ ಅವರ ಸುಳಿವು ಸಿಕ್ಕಿರಲಿಲ್ಲ. ಹೀಗಾಗಿ ಅವರ ಕುಟುಂಬದವರು ಪೊಲೀಸರ ಮೊರೆ ಹೋಗಿದ್ದರು.
ಅಂಕೋಲಾ ಕುಂಟಕಣಿ ಪಂಚಾಯತ ವ್ಯಾಪ್ತಿಯ ಅಸೊಳ್ಳಿ ಗ್ರಾಮದ ಶ್ರೀದೇವಿ ಈಶ್ವರ ಗೌಡ (18) ಅವರು ಸಹ ದಿಢೀರ್ ಆಗಿ ಕಣ್ಮರೆಯಾಗಿದ್ದರು. ಜೂನ್ 24ರಂದು ಮುಂಜಾನೆ ತಾಯಿಯ ಔಷಧಿ ತರಲು ಶಿರಸಿ ಟಿಎಸ್‌ಎಸ್ ಆಸ್ಪತ್ರೆಗೆ ಹೋಗುವುದಾಗಿ ಹೇಳಿದ್ದ ಶ್ರೀದೇವಿ ಗೌಡ ಅವರು ಎಲ್ಲಿ ಹೋದರು? ಎಂದು ಯಾರಿಗೂ ಗೊತ್ತಾಗಿಲ್ಲ. ಟಿಎಸ್‌ಎಸ್ ಆಸ್ಪತ್ರೆಯಲ್ಲಿಯೂ ಅವರು ಆ ದಿನ ಕಾಣಿಸಿಕೊಂಡಿಲ್ಲ. ಶ್ರೀದೇವಿ ಗೌಡ ಅವರ ಕುಟುಂಬದವರು ಸಹ ಸಾಕಷ್ಟು ಹುಡುಕಾಟ ನಡೆಸಿದರೂ ಅದರಿಂದ ಪ್ರಯೋಜನವಾಗಿರಲ್ಲ. ಹೀಗಾಗಿ ಅವರು ಸಹ ಸಹಾಯ ಕೋರಿ ಪೊಲೀಸರ ಮೊರೆ ಹೋಗಿದ್ದರು.
ಇದನ್ನು ಓದಿ: ನಾವು ಮನೆಗ್ ಹೋಗೋದಿಲ್ಲ!
ಈ ದಿನ ಆ ಯುವತಿಯರಿಬ್ಬರೂ ಸುರಕ್ಷಿತವಾಗಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ತಮ್ಮಿಷ್ಟದ ಹುಡುಗರೊಂದಿಗೆ ಮದುವೆಯಾಗಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಯಲ್ಲಾಪುರದ ದೇವಿ ದೇವಸ್ಥಾನದಲ್ಲಿ ಶ್ರೀದೇವಿ ಗೌಡ ಅವರು ಮದುವೆ ಆಗಿದ್ದಾರೆ. ಸಾಕ್ಷಿ ಅವರು ಸಹ ತಮ್ಮ ಸಂಬAಧಿ ಯುವಕನನ್ನೇ ಪ್ರೀತಿಸುತ್ತಿದ್ದು, ಅವರನ್ನು ವಿವಾಹವಾಗಿದ್ದಾರೆ. ಪ್ರೀತಿಗೆ ಕುಟುಂಬದವರು ಒಪ್ಪುವ ಸಾಧ್ಯತೆ ಕಡಿಮೆಯಿರುವ ಕಾರಣ ಆ ಎರಡು ಯುವತಿಯರು ಓಡಿ ಹೋಗಿ ಮದುವೆ ಆಗಿದ್ದಾರೆ. ವಾತಾವರಣ ತಿಳಿಯಾಗುವವರೆಗೆ ನವ ಜೋಡಿ ಊರಿನಿಂದ ಹೊರಗಿರುವ ಸಾಧ್ಯತೆ ಹೆಚ್ಚಿದೆ. ಕಾಣೆಯಾದ ಇಬ್ಬರು ಯುವತಿಯರು ತಮ್ಮ ಪ್ರಿಯಕರನ ಜೊತೆ ಹಾರ ಬದಲಿಸಿಕೊಂಡ ಫೋಟೋಗಳು ಸಿಕ್ಕಿವೆ.