`ಯಕ್ಷಗಾನ ಸಂಪ್ರದಾಯ ಉಳಿಸುವುದು ಪ್ರಧಾನ ಅಲ್ಲ. ನನಗೆ ನಾಲ್ಕು ಕಾಸು ಎಲ್ಲಿ ಹೆಚ್ಚಿಗೆ ಸಿಗುತ್ತದೆ ಎಂಬುದೇ ಪ್ರಧಾನ’ ಎಂದು ಯಕ್ಷಗಾನ ವಿದ್ಯಾಧರ ಜಲವಳ್ಳಿ ಅವರು ಹೇಳಿದ್ದಾರೆ. ಯಕ್ಷಗಾನ ಅಕಾಡೆಮಿ ಮಾಜಿ ಅಧ್ಯಕ್ಷ ಜಿ ಎಲ್ ಹೆಗಡೆ ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ್ದು, `ಕೇವಲ ಹೊಟ್ಟೆಪಾಡಿಗಾಗಿ ಯಕ್ಷಗಾನ ಅವಲಂಬಿಸುತ್ತೇವೆ ಎಂಬುದು ಸರಿಯಲ್ಲ’ ಎಂದಿದ್ದಾರೆ. ಅದೇ ವೇದಿಕೆಯಲ್ಲಿ ವಿದ್ಯಾಧರ ಜಲವಳ್ಳಿ ಅವರ ಮಾತನ್ನು ಖಂಡಿಸಿದ್ದಾರೆ.
ಕುಮಟಾ ಹವ್ಯಕ ಭವನದಲ್ಲಿ ಸಂಸ್ಕಾರ ಭಾರತಿಯವರು ಯಕ್ಷಗಾನ ಕಲಾವಿದರನ್ನೆಲ್ಲ ಒಗ್ಗೂಡಿಸಿ ಕಾರ್ಯಕ್ರಮ ನಡೆಸಿದ್ದು, ಈ ವೇದಿಕೆಯಲ್ಲಿ ವಿದ್ಯಾಧರ ಜಲವಳ್ಳಿ ಹಾಗೂ ಜಿ ಎಲ್ ಹೆಗಡೆ ಅವರ ನಡುವೆ ಮಾತಿನ ಯುದ್ಧ ನಡೆದಿದೆ. ಮೊದಲು ಭಾಷಣ ಮಾಡಿದ ವಿದ್ಯಾಧರ ಜಲವಳ್ಳಿ ಅವರು `ಯಕ್ಷಗಾನದಲ್ಲಿ ಸಂಪ್ರದಾಯ ಉಳಿಸುವುದು ಪ್ರಧಾನ ಅಲ್ಲ. ನನಗೆ ಎಲ್ಲಿ ನಾಲ್ಕು ಕಾಸು ಜಾಸ್ತಿ ಸಿಗುತ್ತದೆ? ಎಂಬುದೇ ಮುಖ್ಯ. ವಿಮರ್ಷೆ ಮಾಡುವವರು ಹಾಗೂ ಭಾಷಣ ಮಾಡುವವರು ಸಂಬಳ ಕೊಡುವುದಿಲ್ಲ. ಭಾಷಣ ಮಾಡಿದವರು ಮನೆಗೆ ಹೋಗಿ ಮಲಗುತ್ತಾರೆ. ನಾವು ಹೊಟ್ಟೆಗೆ ಏನು ಮಾಡುವುದು?’ ಎಂದು ಪ್ರಶ್ನಿಸಿದ್ದಾರೆ.
`ಯಕ್ಷಗಾನ ಹಾಳಾಗುತ್ತಿದೆ. ಯಕ್ಷಗಾನ ಕುಲಗೆಡಿಸುತ್ತಿದ್ದಾರೆ ಎಂಬುದು ಈಗಿನದಲ್ಲ. ಯಕ್ಷಗಾನ ಮೊದಲಿನ ಹಾಗಿಲ್ಲ ಎಂಬುದು ಪ್ರತಿ ದಿನ ಯಕ್ಷಗಾನ ಕುಣಿಯುವ ನನ್ನಂಥ ಎಲ್ಲಾ ಕಲಾವಿದರಿಗೂ ಗೊತ್ತಿರುವ ವಿಷಯ. ಯುವ ಕಲಾವಿದರಿಗೆ ಕೌರವನ ಪರಿಸ್ಥಿತಿ. ಧರ್ಮ ಯಾವುದು ಎಂದು ಗೊತ್ತು. ಆದರೆ, ಅದನ್ನು ಆಚರಿಸಲು ಆಗುವುದಿಲ್ಲ. ಅಧರ್ಮ ಯಾವುದು ಎಂದು ಗೊತ್ತು. ಆದರೆ, ಅದನ್ನು ಬಿಟ್ಟಿರಲು ಆಗುವುದಿಲ್ಲ. `ನಾವು ಕುಣಿಯುತ್ತಿರುವುದು ಯಕ್ಷಗಾನಕ್ಕೆ ಅಲ್ಲ ಎಂದು ಗೊತ್ತು. ಆದರೆ, ಮೊದಲಿನ ಯಕ್ಷಗಾನ ಮಾಡಿದರೆ ನಮ್ಮನ್ನು ಮೂಲೆಗುಂಪು ಮಾಡುತ್ತಾರೆ. ಹೀಗಿರುವಾಗ, ಯಾವುದು ಜನರನ್ನು ರಂಜಿಸುತ್ತದೆಯೋ ಅದನ್ನು ಮಾಡುವುದು ಮುಖ್ಯ. ಯಕ್ಷಗಾನ ಉಳಿಸಲು ಯಾವ ಕಲಾವಿದ-ಯಾವ ಸಂಘಟನೆಯೂ ಬೇಡ. ಯಕ್ಷಗಾನ ಕುಲಗೆಡದ ಹಾಗೇ ಕಲಾವಿದರು ನೋಡಿಕೊಂಡರೆ ಸಾಕು’ ಎಂದಿದ್ದಾರೆ. `ಯಕ್ಷಗಾನ ಹಾಳಾಗಿದೆ ಎಂದು ನಾವು ಹೇಳುವಾಗ ಸರಿ ಮಾಡುವುದು ಹೇಗೆ ಎನ್ನುವುದರ ಬಗ್ಗೆ ಚಿಂತಿಸಬೇಕು’ ಎಂದು ಹೇಳಿದ್ದಾರೆ.
`ಉಡುಪಿಯಲ್ಲಿ ಯಕ್ಷಗಾನ ತರಬೇತಿ ನಡೆಸುತ್ತಾರೆ. ಅದಕ್ಕೆ 25 ಜನ ಸಹ ಹೋಗುವುದಿಲ್ಲ. ನಾನು ಹೋಗಿಲ್ಲ. 35 ವರ್ಷ ಸೇವೆ ಸಲ್ಲಿಸಿದ ನಾನು ಅಲ್ಲಿ ಹೋಗದಿದ್ದರೂ ನಡೆಯುತ್ತದೆ ಎಂಬುದು ನನ್ನ ಭಾವನೆ. ಇಷ್ಟರ ಮೇಲೆ ಕಲಿಯುವಂಥಹುದು ಇಲ್ಲ. ನಾವು ಕಲಿಸಲು ಹೋಗಬೇಕು, ಕಲಿಯಲಿಕ್ಕೆ ಅಲ್ಲ ಎಂಬ ಭಾವನೆ ತಲೆಯಲ್ಲಿದೆ’ ಎಂದಿದ್ದಾರೆ. `ಯಕ್ಷಗಾನದಲ್ಲಿ ಸಿನಿಮಾ ಹಾಡು ಬಂದಿದ್ದು, ಈಚೆಗೆ ಅಲ್ಲ. 10 ವರ್ಷದ ಹಿಂದೆ ಹೆಚ್ಚು ಹಾಳಾಗಿದೆ. ಅಷ್ಟೇ. ಮೊದಲಿನ ಕಲಾವಿದರು ಸ್ವಲ್ಪ ಸ್ವಲ್ಪ ಹಾಳು ಮಾಡುತ್ತ ಬಂದಿದ್ದರು’ ಎಂದು ವಿದ್ಯಾಧರ ಜಲವಳ್ಳಿ ಅವರು ಹೇಳಿದ್ದಾರೆ. `ಯಕ್ಷಗಾನಕ್ಕೆ ವಿಮರ್ಶೆ ಬೇಕು. ಬುದ್ದಿ ಹೇಳುವವರು ಬೇಕು. ಹಿರಿಯರ ಮಾರ್ಗದರ್ಶನ ಬೇಕು ಎಂದು ಏನೇ ಹೇಳಿ. ಆದರೆ, ಹಿರಿಯ ಕಲಾವಿದರು ನಮಗೆ ತೆಂಗಿನ ಮರದ ಹಾಗಿರಬೇಕು. ಉಳಿದ ಕಲಾವಿದರಿಗೆ ಬೆಳೆಯುವ ಅವಕಾಶ ಕೊಡಬೇಕು’ ಎಂದಿದ್ದಾರೆ. `ಹಿರಿಯ ಕಲಾವಿದರು ಆಲದ ಮರ ಹಾಗಾಗಬಾರದು’ ಎಂದಿದ್ದಾರೆ. ಕೊನೆಗೆ `ಆದಷ್ಟು ಸಂಪ್ರದಾಯಕ್ಕೆ ಒತ್ತು ಕೊಡೋಣ. ಪೂರ್ಣ ಸಂಪ್ರದಾಯದ ಹಿಂದೆ ಹೋದರೆ ಜನ ನೋಡುವುದಿಲ್ಲ’ ಎಂದು ವಿದ್ಯಾಧರ ಜಲವಳ್ಳಿ ಅವರು ಹೇಳಿದ್ದಾರೆ.
ಇದಾದ ನಂತರ ಭಾಷಣ ಮಾಡಿದ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಜಿ ಎಲ್ ಹೆಗಡೆ ಅವರು `ಕೇವಲ ಹೊಟ್ಟೆಪಾಡಿಗಾಗಿ ಯಕ್ಷಗಾನ ಅವಲಂಬಿಸುತ್ತೇವೆ ಎಂಬುದು ಸರಿಯಲ್ಲ.`ಅದರಲ್ಲಿಯೂ ವಿದ್ಯಾಧರ ಜಲವಳ್ಳಿ ಅವರು ಇಂಥ ಮಾತನಾಡುವುದು ಶೋಭೆಯಲ್ಲ ಎಂದು ಅದೇ ವೇದಿಕೆಯಲ್ಲಿ ನೇರ ಮಾತನಾಡಿದ್ದಾರೆ. `ಯಕ್ಷಗಾನ ರಂಗಕ್ಕೆ ತನ್ನದೇ ಆದ ಸಂಸ್ಕಾರವಿದೆ. ಆ ಸಂಸ್ಕಾರವನ್ನು ಯುವ ಕಲಾವಿದರಿಗೆ ತಿಳಿಸುವ ಕಾರ್ಯ ಆಗಬೇಕಿದೆ’ ಎಂದು ಹೇಳಿದ್ದಾರೆ. `ಯಕ್ಷಗಾನಕ್ಕೆ ಅನೇಕ ಯುವ ಕಲಾವಿದರು ಆಗಮಿಸುತ್ತಿದ್ದಾರೆ. ಅಂಥವರಿಗೆ ಹಿರಿಯ ಕಲಾವಿದರ ಮಾರ್ಗದರ್ಶನ ಮುಖ್ಯವಾಗಿದೆ. ಕೇವಲ ಹೊಟ್ಟೆಪಾಡಿಗಾಗಿ ಯಕ್ಷಗಾನ ಅವಲಂಬಿಸುತ್ತೇವೆ ಎಂಬುದು ಸರಿಯಲ್ಲ’ ಎಂದವರು ಹೇಳಿದ್ದಾರೆ. `ಇಂಗ್ಲಿಷ್ ವ್ಯಾಮೋಹಕ್ಕೆ ಒಳಗಾಗಿ ಜನ ಸಂಸ್ಕಾರ ಮರೆಯುತ್ತಿದ್ದಾರೆ. ಸಂಸ್ಕಾರ-ಸoಸ್ಕೃತಿಯಲ್ಲಿ ಸಾಕಷ್ಟು ಶಕ್ತಿಯಿದ್ದು, ಇಂಗ್ಲಿಷ್ ವ್ಯಾಮೋಹವೂ ಆಯುರ್ವೇದ ಶಕ್ತಿಯನ್ನು ನಾಶ ಮಾಡುತ್ತಿದೆ. ಸಂಸ್ಕೃತವನ್ನು ನಿಂದಿಸುವುದು ಸರಿಯಲ್ಲ. ಸಂಸ್ಕೃತ ಕೇವಲ ಬ್ರಾಹ್ಮಣರ ಭಾಷೆ ಎನ್ನುವವರು ಮೂರ್ಖರು’ ಎಂದು ಜಿ ಎಲ್ ಹೆಗಡೆ ಅವರು ಹೇಳಿದ್ದಾರೆ.
`ನಮ್ಮ ನಮ್ಮೊಳಗೆ ಸಣ್ಣ ಸಣ್ಣ ಕೋಳಿ ಜಗಳ ಏನೇ ಇದ್ದರೂ ಯಕ್ಷಗಾನದ ವಿಷಯದಲ್ಲಿ ಎಲ್ಲರೂ ಒಂದಾಗಬೇಕು. ಕಲಾ ಆರಾಧನೆಯ ಶಕ್ತಿಯನ್ನು ಒಗ್ಗಟ್ಟಿನಿಂದ ಪ್ರದರ್ಶಿಸಬೇಕು’ ಎಂದು ಕರೆ ನೀಡಿದ್ದಾರೆ. `ವಿಶಾಲವಾದ ಪ್ರಪಂಚದಲ್ಲಿ ಯಕ್ಷಗಾನ ಎಂಬುದು ಅತ್ಯಂತ ಸಣ್ಣ ಕ್ಷೇತ್ರ. ಈ ರಂಗವನ್ನು ಶುದ್ಧಿ ಮಾಡಲು ಸಾಧ್ಯವಾಗದೇ ಇದ್ದರೆ ಏನು ಪ್ರಯೋಜನ:?’ ಎಂದು ಸಭೀಕರನ್ನು ಪ್ರಶ್ನಿಸಿದರು. `ಸಂಸ್ಕಾರ ಭಾರತಿಯೂ ಹಳ್ಳಿ ಹಳ್ಳಿಗೆ ಹೋಗಿ ಯಕ್ಷಗಾನದ ಕೆಲಸ ಮಾಡದಿದ್ದರೆ ಅಸ್ತಿತ್ವ ಕಳೆದುಕೊಳ್ಳುವ ಆತಂಕವಿದೆ’ ಎಂದರು. `ಎಲ್ಲಾ ಕಲಾವಿದರನ್ನು ಒಟ್ಟಿಗೆ ಕೂಡಿಸುವುದು ಕಷ್ಟ. ಅದಾಗಿಯೂ, ಇಲ್ಲಿ ಒಟ್ಟಿಗೆ ಕೂಡಿಸಿರುವುದು ಸಾಧನೆ’ ಎಂದು ಬಣ್ಣಿಸಿದರು. ವಿದ್ಯಾಧರ ಜಲವಳ್ಳಿ ಅವರ ಮಾತನ್ನು ಕೆಲವರು ಸ್ವಾಗತಿಸಿ, ಅನೇಕರು ವಿರೋಧಿಸಿದ್ದಾರೆ. ಜಿ ಎಲ್ ಹೆಗಡೆ ಅವರ ಭಾಷಣದ ಕುರಿತು ಪರ-ವಿರೋಧ ಚರ್ಚೆ ಶುರುವಾಗಿದೆ.