ಸ್ವಂತದೊoದು ಮನೆ ಖರೀದಿಸಬೇಕು ಎಂಬ ಆಸೆ ಕಂಡಿದ್ದ ಗೋಕರ್ಣ ಬೇಲೆಹಿತ್ತಲದ ಸೋಮಿ ಗೌಡ ಅವರು ಮೂವರು ಎಜಂಟರ ಕೈಗೆ ಕಾಸು ಕೊಟ್ಟು ಮೋಸ ಹೋಗಿದ್ದಾರೆ. ತಾರಿಮಕ್ಕಿಯಲ್ಲಿ ಮನೆಯೊಂದನ್ನು ಕಾಣಿಸಿದ ಅದೇ ಊರಿನ ಮಲ್ಲಿಕಾರ್ಜುನ ಕಲಾಲ್, ದೀಪಾ ಕಲಾಲ್ ಹಾಗೂ ಮೇಲಿನಕೇರಿಯ ದತ್ತಾ ಬಾಗಿಲ ಸೇರಿ ಸೋಮಿ ಗೌಡ ಅವರಿಗೆ 4.50 ಲಕ್ಷ ರೂ ಯಾಮಾರಿಸಿದ್ದಾರೆ.
ಕುಮಟಾ ಗೋಕರ್ಣ ಬಳಿಯ ಬೇಲೆಹಿತ್ತಲ ಬಳಿ ಸೋಮಿ ಗೌಡ ಹಾಗೂ ಸೋಮು ಗೌಡ ದಂಪತಿ ವಾಸವಾಗಿದ್ದಾರೆ. 57 ವರ್ಷದ ಸೋಮಿ ಗೌಡ ಅವರು ಕೂಲಿ ಕೆಲಸ ಮಾಡಿ ಬದುಕು ಕಟ್ಟಿಕೊಂಡಿದ್ದಾರೆ. ಸ್ವಂತಕ್ಕೆ ಒಂದು ಮನೆ ಖರೀದಿಸಬೇಕು ಎಂಬುದು ಅವರ ದಶಕದ ಹಿಂದಿನ ಕನಸು. ದಿನವೂ ದುಡಿದು ತಿನ್ನುವ ಆ ಕುಟುಂಬಕ್ಕೆ ಮನೆ ಖರೀದಿ ಕನಸು ಕನಸಾಗಿಯೇ ಉಳಿದಿದೆ. ಹೀಗಿರುವಾಗ ಸೋಮಿ ಗೌಡ ಅವರಿಗೆ ತಾರಿಮಕ್ಕಿಯ ಮಲ್ಲಿಕಾರ್ಜುನ ಕಲಾಲ್ ಅವರ ಪರಿಚಯವಾಗಿದೆ. ಅವರ ಜೊತೆ ದೀಪಾ ಕಲಾಲ್ ಹಾಗೂ ಗೋಕರ್ಣ ಮೇಲಿನ ಕೇರಿಯ ದತ್ತಾ ಬಾಗಿಲ್ ಸೇರಿ ಮನೆ ಕೊಡಿಸುವ ಭರವಸೆ ನೀಡಿದ್ದಾರೆ.
2022ರಲ್ಲಿ ತಾರಿಮಕ್ಕಿಯಲ್ಲಿರುವ ಮನೆಯೊಂದನ್ನು ಕಾಣಿಸಿದ ಆ ಮೂವರು 20 ಲಕ್ಷ ರೂಪಾಯಿಗೆ ಮನೆ ವ್ಯವಹಾರ ಮುಗಿಸುವುದಾಗಿ ಹೇಳಿದ್ದಾರೆ. ಇದಕ್ಕಾಗಿ 5 ಲಕ್ಷ ರೂ ಮುಂಗಡ ಹಣವನ್ನು ನೀಡುವಂತೆ ಕೇಳಿದ್ದಾರೆ. ಆ ಮೂವರನ್ನು ನಂಬಿದ ಸೋಮಿ ಗೌಡ ಅವರು 5 ಲಕ್ಷ ರೂ ಹಣ ಕೊಟ್ಟಿದ್ದಾರೆ. ಅದಾದ ನಂತರ 2023ರಲ್ಲಿ ಮನೆ ಖರೀದಿ ಕರಾರುಪತ್ರ ಮಾಡಿದ ಆ ಮೂವರು ಅದಕ್ಕೆ ಸಹಿ ಹಾಕಿಸಿ ಮತ್ತೆ 50 ಸಾವಿರ ರೂಪಡೆದಿದ್ದಾರೆ. ಆದರೆ, ಈವರೆಗೂ ಆ ಮೂವರು ಮನೆಯನ್ನು ಕೊಡಿಸಿಲ್ಲ. ಕೊಟ್ಟ ಹಣವನ್ನು ಮರಳಿಸಿಲ್ಲ.
ಸೋಮಿ ಗೌಡ ಅವರು ಪದೇ ಪದೇ ಆ ಮೂವರಿಗೂ ಫೋನ್ ಮಾಡಿದ್ದಾರೆ. `ಮನೆ ಕೊಡಿಸಿ, ಇಲ್ಲವೇ ಹಣ ಮರಳಿಸಿ’ ಎಂದು ಕೇಳಿದ್ದಾರೆ. ಸೋಮಿ ಗೌಡ ಅವರ ಕಾಟ ಸಹಿಸಲಾಗದೇ 2024ರಲ್ಲಿ ಮಲ್ಲಿಕಾರ್ಜುನ ಕಲಾಲ್ ಅವರು 1 ಲಕ್ಷ ರೂ ಹಿಂತಿರುಗಿಸಿದ್ದಾರೆ. ಉಳಿದ 4.5 ಲಕ್ಷ ರೂ ನೀಡುವಂತೆ ಕೇಳಿದರೂ ಅದನ್ನು ಯಾರೂ ಮರಳಿಸುತ್ತಿಲ್ಲ.
ತಮಗಾದ ಅನ್ಯಾಯದ ಬಗ್ಗೆ ಸೋಮಿ ಗೌಡ ಅವರು ಪೊಲೀಸ್ ಮೊರೆ ಹೋಗಿದ್ದಾರೆ. ಗೋಕರ್ಣ ಪೊಲೀಸರು ಪ್ರಕರಣ ದಾಖಲಿಸಿದ್ದು, ಆ ಮೂವರ ವಿರುದ್ಧ ಕ್ರಮ ಜರುಗಿಸಿದ್ದಾರೆ.