ಸಿದ್ದಾಪುರಕ್ಕೆ ಹೋಗಿದ್ದ ಬಿಜೆಪಿ ರೈತಮೋರ್ಚಾ ಅಧ್ಯಕ್ಷ ಅನಂತಮೂರ್ತಿ ಹೆಗಡೆ ಅವರಿಗೆ ವಿನಾಯಕ ಹೆಗಡೆ ಅವರ ಮನೆಗೆ ಬೆಂಕಿ ಬಿದ್ದ ವಿಷಯ ಗೊತ್ತಾಗಿದೆ. ಲಕ್ಷಾಂತರ ರೂ ಮೌಲ್ಯದ ಅಡಿಕೆ ಸುಟ್ಟಿರುವುದನ್ನು ಕೇಳಿದ ತಕ್ಷಣ ಅನಂತಮೂರ್ತಿ ಹೆಗಡೆ ಅವರು ತಮ್ಮ ಕಾರನ್ನು ಶೇಡಿದಂಟ್ಕಲ್ ಕಡೆ ತಿರುಗಿಸಿದ್ದಾರೆ.
ವಿನಾಯಕ ಹೆಗಡೆ ಅವರು 70 ಚೀಲ ಚಾಲಿ ಅಡಿಕೆಯನ್ನು ಮನೆಯಲ್ಲಿ ದಾಸ್ತಾನು ಮಾಡಿದ್ದರು. ವಿದ್ಯುತ್ ಅವಘಡದಿಂದಾಗಿ ಅದು ಅಗ್ನಿಗೆ ಆಹುತಿಯಾಯಿತು. ನಿನ್ನೆ ಬೆಳಗ್ಗೆ ನಡೆದ ದುರಂತದಿoದ ವಿನಾಯಕ ಹೆಗಡೆ ಅವರಿಗೆ ನಾಲ್ಕು ಲಕ್ಷ ರೂ ನಷ್ಟವಾಗಿದ್ದು, ಅದನ್ನು ಅರಿತು ಅನಂತಮೂರ್ತಿ ಹೆಗಡೆ ಅವರು ಆತಂಕವ್ಯಕ್ತಪಡಿಸಿದರು.
`ಎಲೆ ಚುಕ್ಕಿರೋಗದಿಂದಾಗಿ ಈ ವರ್ಷ ಬಹುತೇಕ ಅಡಿಕೆ ಮರಗಳು ನಾಶವಾಗಿವೆ. ಇನ್ನು ಕೆಲವು ಭಾಗಗಳಲ್ಲಿ ಕೊಳೆರೋಗ ಬಂದು ಶೇ 50ರಷ್ಟು ಅಡಿಕೆ ಕಡಿಮೆಯಾಗಿದೆ. ಹೀಗಿರುವಾಗ ಇಂಥ ದುರಂತ ನಡೆದಿರುವುದು ಆಘಾತಕಾರಿ’ ಎಂದು ಅನಂತಮೂರ್ತಿ ಹೆಗಡೆ ಅವರು ಹೇಳಿದರು. `ಆಕಸ್ಮಿಕ ಬೆಂಕಿ ಅವಘಡದಿಂದ ಹಾನಿಗೊಳಗಾದ ಅಡಿಕೆ ಬೆಳೆಗಾರನಿಗೆ ರಾಜ್ಯ ಸರ್ಕಾರವು ವಿಶೇಷ ಪರಿಹಾರವನ್ನು ನೀಡಬೇಕು. ಆ ಮೂಲಕ ಸರ್ಕಾರ ರೈತಾಪಿ ವರ್ಗದ ಜೊತೆಗಿದೆ ಎನ್ನುವ ಆತ್ಮವಿಶ್ವಾಸವನ್ನು ತುಂಬಬೇಕು’ ಎಂದು ಒತ್ತಾಯಿಸಿದರು.