ಉತ್ತರ ಕನ್ನಡ ಜಿಲ್ಲೆಯ ಅನೇಕ ಕಡೆ ಭಾನುವಾರ ಧಾರಾಕಾರ ಮಳೆಯಾಗಿದೆ. ಮಳೆ ರಭಸಕ್ಕೆ ಗೋಕರ್ಣದ ಆತ್ಮಲಿಂಗ ಮುಳುಗಿದೆ.
ಉತ್ತರ ಕನ್ನಡ ಜಿಲ್ಲೆಯ ವಿವಿಧೆಡೆ ಭಾನುವಾರ ಬೆಳಗ್ಗೆಯೇ ಮಳೆ ಶುರುವಾಗಿದೆ. ರಾತ್ರಿಯವರೆಗೂ ನಿರಂತರವಾಗಿ ಮಳೆ ಸುರಿಯತ್ತಿದೆ. ಮಧ್ಯಾಹ್ನದ ವೇಳೆ ಕೊಂಚ ಬಿಡುವು ನೀಡಿದ್ದ ವರುಣ ಸಂಜೆ ಮತ್ತಷ್ಟು ಜೋರಾಗಿದ್ದು, ಅಲ್ಲಲ್ಲಿ ಜನ ಜೀವನ ಅಸ್ತವ್ಯಸ್ತವಾಗಿದೆ. ಕುಮಟಾ-ಗೋಕರ್ಣ ಭಾಗದಲ್ಲಿ ನಾಲ್ಕು ಗಂಟೆಗಳ ಕಾಲ ನಿರಂತರ ಮಳೆ ಸುರಿದಿದೆ. ಅದರ ಪರಿಣಾಮ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಇಲ್ಲಿನ ಮಹಾಗಣಪತಿ ಮುಂಭಾಗದ ರಸ್ತೆ, ಮೇಲಿನಕೇರಿ ರಸ್ತೆ ಮತ್ತಿತರ ಪ್ರಮುಖ ರಸ್ತೆಗಳು ಜಲಾವೃತಗೊಂಡಿದೆ. ಹಲವು ಪ್ರಮುಖ ಮಾರ್ಗಗಳಲ್ಲಿ ಮಳೆ ನೀರು ತುಂಬಿ ಸಂಚಾರಕ್ಕೆ ತೊಡಕಾಗಿದೆ. ಕೇಣಿ- ತದಡಿ ರಾಜ್ಯ ಹೆದ್ದಾರಿಯ ನಾಡುಮಾಸ್ಕೇರಿವರೆಗೆ ಚರಂಡಿ ಸ್ವಚ್ಚಗೊಳಿಸದ ಪರಿಣಾಮ ಗಂಗಾವಳಿಯ ಜನವಸತಿ ಪ್ರದೇಶಕ್ಕೆ ಭಾರಿ ಪ್ರಮಾಣದ ನೀರು ನುಗ್ಗಿದೆ. ತದಡಿ, ಮಾದನಗೇರಿ, ಹಿರೇಗುತ್ತಿ, ಬರ್ಗಿ ಭಾಗದಲ್ಲಿ ಮಳೆಯಿಂದ ರಸ್ತೆ ಸಂಚಾರಕ್ಕೆ ಸಮಸ್ಯೆಯಾಗಿದೆ.
ಗೋಕರ್ಣ ಮಹಾಬಲೇಶ್ವರ ಮಂದಿರದ ಪಶ್ಚಿಮ ದ್ವಾರದ ಮುಂಭಾಗದ ಮುಖ್ಯ ಕಡಲತೀರಕ್ಕೆ ಸಾಗುವ ರಸ್ತೆಯ ಚರಂಡಿ ಸಂಗಮ ನಾಲಾ ಸೇರುವಲ್ಲಿ ಮುಚ್ಚಿದೆ. ಇದರಿಂದ 200 ಮೀಟರಗೂ ಹೆಚ್ಚಿನ ದೂರದ ರಸ್ತೆ ಸಂಪೂರ್ಣ ಕೊಳಚೆ ನೀರು ತುಂಬಿಕೊAಡಿದೆ. ಈ ನೀರು ಉಕ್ಕಿ ರಸ್ತೆಯ ಪಕ್ಕದಲ್ಲಿರುವ ದೇವಾಲಯದ ಭೋಜನ ಶಾಲೆಗೂ ನುಗ್ಗಿದೆ. ಚರಂಡಿ ನೀರು ಸಂಗಮ ನಾಲಾಕ್ಕೆ ಸೇರುವಲ್ಲಿ ಮಣ್ಣು ಹಾಕಿ ಪಕ್ಕದ ಅಂಗಡಿಯವರು ಮುಚ್ಚಿದ್ದು, ಅದನ್ನು ಬಿಡಿಸದ ಕಾರಣ ಜನ ಇನ್ನಷ್ಟು ಸಮಸ್ಯೆ ಅನುಭವಿಸಿದ್ದಾರೆ. ಸಮುದ್ರದ ಅಬ್ಬರ ಹಾಗೂ ಸಂಗಮ ನಾಲಾ ಕಡಲು ಸೇರುವಲ್ಲಿ ಮರಳಿನ ದಿಬ್ಬವಾದ ಪರಿಣಾಮ ನೀರು ಸಮುದ್ರ ಸೇರದೇ ಅಲ್ಲಿಯೇ ನಿಂತಿದೆ. ಅದರಿಂದ ಮಹಾಬಲೇಶ್ವರ ಮಂದಿರದ ತೀರ್ಥ ಹೋಗುವ ಸೋಮಸೋತ್ರದ ನೀರು ಸಂಗಮಕ್ಕೆ ಸೇರುತ್ತಿಲ್ಲ. ಗರ್ಭಗುಡಿಯಲ್ಲಿ ನೀರು ತುಂಬಿದ್ದರಿAದ ಭಕ್ತರ ದರ್ಶನಕ್ಕೂ ಸಮಸ್ಯೆಯಾಗಿದೆ. ಪಂಪ್ ಸೆಟ್ ಅಳವಡಿಸಿ ನೀರನ್ನು ಗರ್ಭಗುಡಿಯಿಂದ ಹೊರ ತೆಗೆಯಲಾಗುತ್ತಿದೆ. ಸದ್ಯ ಸೋಮಸೂತ್ರ ನಾಲಾಕ್ಕೆ ಹೊರಗಿನ ಹೊಲಸು ನೀರು ನುಗ್ಗದಂತೆ ಗೇಟ್ ಅಳವಡಿಸಿದ್ದು, ದೇವಾಲಯದ ಒಳಗಿನ ನೀರನ್ನು ಹೊರ ಹಾಕುವ ಪ್ರಯತ್ನ ನಡೆದಿದೆ.