ಉತ್ತರ ಕನ್ನಡ ಜಿಲ್ಲಾ ಲಾರಿ ಮಾಲಕ ಸಂಘದ ಅಧ್ಯಕ್ಷ ವಿಶ್ವಜಿತ್ ನಾಯಕ ಅವರು ಭಾರತೀಯ ವೆಟರನ್ಸ್ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದು, ತಮ್ಮ ಪ್ರತಿಭೆ ಪ್ರದರ್ಶನಕ್ಕಾಗಿ ಅವರು ಲಂಡನ್’ಗೆ ಹೋಗಿದ್ದಾರೆ. ಸಣ್ಣ ವಯಸ್ಸಿನಲ್ಲಿಯೇ ಕ್ರಿಕೆಟ್ ಕುರಿತು ಅಪಾರ ಆಸಕ್ತಿಹೊಂದಿದ್ದ ಅವರಿಗೆ ಉತ್ತಮ ವೇದಿಕೆ ಸಿಕ್ಕಿದೆ.
ಅಂಕೋಲಾದ ವಿಶ್ವಜಿತ್ ನಾಯಕ ಅವರು ವಿಸಿಐ (ವೆಟರನ್ಸ್ ಕ್ರಿಕೆಟ್ ಇಂಡಿಯಾ) ಅಡಿ ನಡೆಯುವ ‘ಮರ್ಲ್ ಪ್ರೋ ಕಪ್’ಗೆ ಆಯ್ಕೆಯಾಗಿದ್ದಾರೆ. ಅದರ ಅಂಗವಾಗಿ ಅವರು ಲಂಡನ್ ಪ್ರವಾಸ ಮಾಡಿದ್ದು, ಅಲ್ಲಿ ಉತ್ತಮ ಪ್ರದರ್ಶನವನ್ನು ನೀಡಿದ್ದಾರೆ. ವಿಶ್ವಜಿತ್ ನಾಯಕ ಅವರು ಹಲವು ಟೆನ್ನಿಸ್ ಬಾಲ್ ಟೂರ್ನಮೆಂಟ್‌ಗಳಲ್ಲಿ ‘ಶಾಂತಿಕಾ 11’ ಹಾಗೂ ‘ರಾಜ್ 11’ ತಂಡಗಳ ಮೂಲಕ ಭಾಗವಹಿಸುತ್ತಿದ್ದರು. ಕುಮಟಾದಲ್ಲಿ ನಡೆದ ರವಿರಾಜ್ ಟ್ರೋಫಿಯ 25ನೇ ವರ್ಷದ ಬೆಳ್ಳಿ ಕಪ್’ನ್ನು ಅವರು ಗೆದ್ದಿದ್ದರು. 2022ರವರೆಗೆ ಟೆನ್ನಿಸ್ ಬಾಲ್ ಕ್ರಿಕೆಟ್‌ನಲ್ಲಿ ಸಕ್ರಿಯರಾಗಿದ್ದ ಅವರು ನಂತರ ಲೆದರ್ ಬಾಲ್ ಕ್ರಿಕೆಟ್ ಕಡೆ ಆಸಕ್ತಿವಹಿಸಿದ್ದು, ಅದರ ಮುಂದುವರೆದ ಭಾಗವಾಗಿ ಭಾರತೀಯ ವೆಟರನ್ಸ್ ಕ್ರಿಕೆಟ್ ತಂಡಕ್ಕೆ ಆಯ್ಕೆಯಾದರು.
ರೋಟರಿ ಸಂಸ್ಥೆಯ ಸಕ್ರಿಯ ಸದಸ್ಯರಾಗಿದ್ದ ವಿಶ್ವಜಿತ್ ಅವರಿಗೆ ರೋಟರಿ ಮಟ್ಟದ ಟೆನ್ನಿಸ್ ಬಾಲ್ ಟೂರ್ನಿಗಳಲ್ಲಿನ ಪ್ರದರ್ಶನ ಇನ್ನಷ್ಟು ಅವಕಾಶಗಳನ್ನು ತಂದುಕೊಟ್ಟಿತು. ಅವರ ಆಟವನ್ನು ಗುರುತಿಸಿದ ಹುಬ್ಬಳ್ಳಿಯ ಐಎಫ್‌ಸಿಆರ್ ವಿಭಾಗವು ಲೆದರ್ ಬಾಲ್ ಕ್ರಿಕೆಟ್‌ಗೆ ಕರೆದೊಯ್ಯಿತು. ಹುಬ್ಬಳ್ಳಿಯಲ್ಲಿ ಮೊದಲ ಲೆದರ್ ಬಾಲ್ ಪಂದ್ಯ ಆಡಿದ ವಿಶ್ವಜಿತ್ ನಾಯಕ ಅವರು ರೋಟರಿ ಇಂಡಿಯಾ ಪರವಾಗಿ ಆಸ್ಟ್ರೇಲಿಯಾ, ದುಬೈ ಹಾಗೂ ಶ್ರೀಲಂಕಾ ಪ್ರವಾಸವನ್ನು ಮಾಡಿದ್ದಾರೆ. ಅವರ ಅಲ್ಲಿನ ಪ್ರದರ್ಶನ ಗಮನಿಸಿದ ವೆಟರನ್ಸ್ ಕ್ರಿಕೆಟ್ ಇಂಡಿಯಾ ಸಂಸ್ಥೆಯು ವಿಸಿಐ ಟೂರ್ನಿಗಳಿಗೆ ಆಹ್ವಾನಿಸಿದೆ.
ಸದ್ಯ ವಿಶ್ವಜಿತ್ ನಾಯಕ ಅವರು ಲಂಡನ್’ನಲ್ಲಿ ನಡೆದ ಕ್ರಿಕೆಟ್’ನಲ್ಲಿ ಉತ್ತಮವಾಗಿ ಆಡಿದ್ದಾರೆ. ಅವರ ಸಾಧನೆ ಇನ್ನಷ್ಟು ಬೆಳಗಲಿ ಎಂದು ಲಾರಿ ಮಾಲಕರ ಸಂಘದವರು ಹಾರೈಸಿದ್ದಾರೆ.