ಶಿರಸಿ ಗಾಂಧೀನಗರದಲ್ಲಿ ವಾಸವಾಗಿದ್ದ ಗಣಪತಿ ಭಟ್ಟ ಕಂಚಿ ಅವರು ನಿಗೂಢವಾಗಿ ಸಾವನಪ್ಪಿದ್ದು, ಆ ಸಾವಿನ ನಂತರ ಅವರ ಆಸ್ತಿಪಡೆಯಲು ಮಗಳೊಬ್ಬರು ಹುಟ್ಟಿ ಬಂದಿದ್ದಾರೆ. ಬೆಂಗಳೂರಿನ ಅರ್ಚನಾ ಕೆ ಎಂಬಾತರು ನಕಲಿ ದಾಖಲೆಗಳನ್ನು ಸೃಷ್ಠಿಸಿ ಗಣಪತಿ ಭಟ್ಟ ಅವರ ಆಸ್ತಿ ಲಪಟಾಯಿಸಿದ್ದಾರೆ.
ಶಿರಸಿಯ ಗಾಂಧೀನಗರದಲ್ಲಿ ಗಣಪತಿ ಭಟ್ಟ ಕಂಚಿ ಅವರು ವಾಸವಾಗಿದ್ದರು. ದೈವಜ್ಞ ಕಲ್ಯಾಣ ಮಂಟಪದ ಬಳಿಯಿರುವ `ಸಂಕಲ್ಪ ನಿವಾಸ’ದಲ್ಲಿ ಅವರು ಜೀವಿಸುತ್ತಿದ್ದರು. ಇಂಡಿಯನ್ ಓವರ್ಸಿಸ್ ಬ್ಯಾಂಕಿನಲ್ಲಿ ಗಣಪತಿ ಭಟ್ಟ ಕಂಚಿ ಅವರು ಸೀನಿಯರ್ ಮ್ಯಾನೇಜರ್ ಆಗಿದ್ದರು. ನಿವೃತ್ತಿ ನಂತರ ಅವರು ಗಾಂಧೀನಗರದಲ್ಲಿ ವಾಸವಾಗಿದ್ದರು. ಗಣಪತಿ ಭಟ್ಟ ಅವರ ಪುತ್ರಿ ಸೀಮಾ ಕಂಚಿ ಅವರು ಸಾಪ್ಟವೇರ್ ಇಂಜಿನಿಯರ್ ಆಗಿದ್ದು, ಅವರು ವಿದೇಶದಲ್ಲಿ ಉದ್ಯೋಗದಲ್ಲಿದ್ದರು. ಸೀಮಾ ಕಂಚಿ ಅವರು ತಮ್ಮ ಬಳಿಯಿದ್ದ ಹಣ-ಒಡವೆಯನ್ನು ತಂದೆಗೆ ಕೊಟ್ಟು ಅದನ್ನು ಬ್ಯಾಂಕಿನಲ್ಲಿ ಭದ್ರವಾಗಿರಿಸುವಂತೆ ಸೂಚಿಸಿದ್ದರು. ಅದರ ಪ್ರಕಾರ, ಗಣಪತಿ ಕಂಚಿ ಅವರು ತಾವು ಕೆಲಸ ಮಾಡಿದ್ದ ಇಂಡಿಯನ್ ಓವರ್ಸಿಸ್ ಬ್ಯಾಂಕಿನಲ್ಲಿ ಲಾಕರ್ ತೆರೆದು ಅಲ್ಲಿ ಒಡವೆ ಹಾಗೂ ದಾಖಲೆಗಳನ್ನಿರಿಸಿದ್ದರು.
2025ರ ಏಪ್ರಿಲ್ 8ರಂದು ಗಣಪತಿ ಭಟ್ಟ ಅವರು ಸೀಮಾ ಅವರಿಗೆ ಕೊನೆಯದಾಗಿ ವಾಟ್ಸಪ್ ಫೋನ್ ಮಾಡಿದ್ದರು. `ಆದಷ್ಟು ಬೇಗ ಭಾರತಕ್ಕೆ ಬಂದು ವಿಲ್ ಪತ್ರ ಹಾಗೂ ದಾಖಲೆ-ಒಡವೆ ಪಡೆಯಬೇಕು’ ಎಂದು ಸೂಚಿಸಿದ್ದರು. ಅದಾದ ಕೆಲವೇ ದಿನಗಳಲ್ಲಿ ಗಣಪತಿ ಭಟ್ಟ ಅವರು ನಿಗೂಢವಾಗಿ ಸಾವನಪ್ಪಿದರು. ಏಪ್ರಿಲ್ 19ರಂದು ಗಣಪತಿ ಭಟ್ಟ ಅವರು ಸಾವನಪ್ಪಿದ್ದು, ಅವರ ಕುಟುಂಬಕ್ಕೆ ಸಂಬAಧವೇ ಇಲ್ಲದ ಅರ್ಚನಾ ಕೆ ಅವರಿಗೆ ಈ ವಿಷಯ ಗೊತ್ತಾಯಿತು. ಬೆಂಗಳೂರಿನ ದೊಮ್ಮಲೂರಿನ ಬಳಿ ವಾಸವಾಗಿದ್ದ ಅರ್ಚನಾ ಕೆ ಅವರು ಶಿರಸಿಗೆ ಬಂದರು. `ತಾನೇ ಅವರ ಮಗಳು’ ಎಂದು ಬಿಂಬಿಸಿಕೊAಡು ಗಣಪತಿ ಭಟ್ಟ ಕಂಚಿ ಅವರ ಮರಣೋತ್ತರ ಪರೀಕ್ಷೆ ಮಾಡಿಸಿದರು. ಅವರೇ ಮುಂದೆ ನಿಂತು ಶವ ಸಂಸ್ಕಾರವನ್ನು ಮಾಡಿದ್ದು, ವಿದೇಶದಲ್ಲಿದ್ದ ಸೀಮಾ ಕಂಚಿ ಅವರು ಊರಿಗೆ ಬರುವಷ್ಟರಲ್ಲಿ ಗಣಪತಿ ಭಟ್ಟ ಕಂಚಿ ಅವರ ಬ್ಯಾಂಕ್ ಖಾತೆಯಲ್ಲಿದ್ದ ಹಣವೂ ಕಾಣೆಯಾಗಿತ್ತು.
ವಿವಿಧ ನಕಲಿ ದಾಖಲೆ ಸೃಷ್ಠಿ ಹಾಗೂ ಸೀಮಾ ಕಂಚಿ ಅವರ ಆಧಾರ್ ಕಾರ್ಡ, ಸಹಿ ದುರುಪಯೋಗಪಡಿಸಿಕೊಂಡ ಅರ್ಚನಾ ಕೆ ಅವರು ಬ್ಯಾಂಕ್ ಲಾಕರಿನಲ್ಲಿದ್ದ ಚಿನ್ನ ಲಪಟಾಯಿಸಿದ್ದರು. ವಿವಿಧ ಕಾಗದಪತ್ರಗಳನ್ನು ತಮ್ಮದಾಗಿಸಿಕೊಂಡಿದ್ದರು. ಅಗಸೆಬೈಲಿನ ಮಾಲಾ ಕಂಚಿ, ಬೆಂಗಳೂರಿನ ಡೊಮ್ಮಲೂರಿನ ಸುಶ್ಮಾ ಕೆ ಅವರು ಈ ಕೃತ್ಯಕ್ಕೆ ಸಹಕಾರ ನೀಡಿದ್ದರು. ಗಣಪತಿ ಭಟ್ಟ ಅವರ ಹೆಸರಿನಲ್ಲಿ ಇಂಡಿಯನ್ ಓವರಸಿಸ್ ಬ್ಯಾಂಕ್ ಹಾಗೂ ಅಂಚೆ ಕಚೇರಿಗಳಿಂದ 1.20 ಕೋಟಿ ರೂ ಹಣ ಹಾಗೂ ಆಸ್ತಿ ಬೇರೆ ಬೇರೆ ಹೆಸರಿಗೆ ಹೋಗಿತ್ತು. ಬ್ಯಾಂಕ್ ಉದ್ಯೋಗಿ ರಮೇಶ್ ಅವರು ಸಹ ಸೀಮಾ ಕಂಚಿ ಅವರ ಒಪ್ಪಿಗೆ ಇಲ್ಲದೇ ಬ್ಯಾಂಕ್ ಖಾತೆಯ ಹಣವನ್ನು ಮಾಲಾ ಕಂಚಿ ಅವರಿಗೆ ವರ್ಗಾಯಿಸಿದ್ದರು.
ಅದಾದ ನಂತರ ಅರ್ಚನಾ ಕೆ ಅವರು ಗಾಂಧೀನಗರದಲ್ಲಿರುವ ಸಂಕಲ್ಪ ನಿವಾಸ ಸಂಪೂರ್ಣವಾಗಿ ತಮ್ಮ ವಶಕ್ಕೆಪಡೆದಿದ್ದರು. ವಿದೇಶದಿಂದ ಬಂದ ಸೀಮಾ ಕಂಚಿ ಅವರು ತಮ್ಮ ನಿವಾಸಕ್ಕೆ ಹೋಗಿದ್ದು, ಅಲ್ಲಿದ್ದ ಅರ್ಚನಾ ಕೆ, ಮಾಲಾ ಕಂಚಿ ಹಾಗೂ ಸುಶ್ಮಾ ಕೆ ಸೇರಿ ಸೀಮಾ ಅವರನ್ನು ಆ ಮನೆಯಿಂದ ಹೊರ ದಬ್ಬಿದರು. ಈ ವೇಳೆ ಮಾಲಾ ಕಂಚಿ ಅವರು ಸೀಮಾ ಅವರ ಕುತ್ತಿಗೆ ಹಿಡಿದು ನೋವು ಮಾಡಿದರು. ಅದಾದ ನಂತರ ಮನೆ ಮುಂದೆ ಬಿದ್ದಿದ್ದ ಗಣಪತಿ ಭಟ್ಟ ಕಂಚಿ ಅವರ ಚಪ್ಪಲಿಯಿಂದ ಸೀಮಾ ಕಂಚಿ ಅವರಿಗೆ ಹೊಡೆದರು. `ಇದೇ ನಿನಗೆ ಸಿಗುವ ಆಸ್ತಿ’ ಎಂದು ಹೇಳಿ ನಿಂದಿಸಿದರು. ಅದಾದ ನಂತರವೂ ಸೀಮಾ ಅವರು ತಮ್ಮ ದಾಖಲೆಪಡೆಯಲು ಮನೆ ಬಳಿ ಹೋಗಿದ್ದು, ಅಲ್ಲಿದ್ದ ವೆಂಕಟ್ರಮಣ ಕಂಚಿ ಅವರಿಂದ ತೊಂದರೆ ಅನುಭವಿಸಿದರು. ಈ ಎಲ್ಲಾ ವಿಷಯಗಳಿಂದ ನೊಂದ ಸೀಮಾ ಕಂಚಿ ಅವರು ಮತ್ತೆ ವಿದೇಶಕ್ಕೆ ಹೋದರು. ಅನಾರೋಗ್ಯದಿಂದ ಬಳಲುತ್ತಿರುವ ಅವರು ತಮಗಾದ ಅನ್ಯಾಯದ ಬಗ್ಗೆ ಅಂಕೋಲಾ ಅವರ್ಸಾದ ಮಹೇಶ ಮೋಹನ ನಾಯಕ ಅವರಲ್ಲಿ ಹೇಳಿಕೊಂಡರು. ತಪ್ಪು ಮಾಡಿದವರಿಗೆ ಶಿಕ್ಷೆಯಾಗಲೇ ಬೇಕು ಎಂದು ಮಹೇಶ ನಾಯಕ ಅವರು ಈ ಬಗ್ಗೆ ಶಿರಸಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದರು. ಸೀಮಾ ಅವರ ಹೇಳಿಕೆಯನ್ನುಪಡೆದ ಪೊಲೀಸರು ಪ್ರಕರಣ ದಾಖಲಿಸಿದ್ದು, ಸತ್ಯಾಸತ್ಯತೆಯ ಶೋಧ ಶುರು ಮಾಡಿದ್ದಾರೆ.