ಬೇರೆಯವರನ್ನು ಬೆದರಿಸುವುದನ್ನೇ ಜೀವನ ಮಾಡಿಕೊಂಡಿದ್ದ ಮುಂಡಗೋಡಿನ ರೌಡಿಗಳಿಬ್ಬರನ್ನು ಉತ್ತರ ಕನ್ನಡ ಜಿಲ್ಲೆಯಿಂದ ಹೊರಗೆ ಓಡಿಸಲಾಗಿದೆ. ಮೀಟರ್ ಬಡ್ಡಿ ದಂಧೆ ಜೊತೆ ಸಮಾಜ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಮಂಜು ನವಲೆ ಹಾಗೂ ಮಧು ಸಿಂಗ್ ಅವರನ್ನು ಗಡಿಪಾರು ಮಾಡಲಾಗಿದೆ.
ಮುಂಡಗೋಡ ಮೂಲದ ರೌಡಿಶೀಟರ್ ಆದ ಮಂಜು ನವಲೆ ಹಾಗೂ ಮಧು ಸಿಂಗ್ ವಿರುದ್ಧ ಕೊಲೆ ಹಾಗೂ ಮೀಟರ್ ಬಡ್ಡಿ ವ್ಯವಹಾರ ಸೇರಿದಂತೆ ವಿವಿಧ ಪ್ರಕರಣಗಳು ದಾಖಲಾಗಿದ್ದವು. ಪೊಲೀಸರು ಅವರ ಮೇಲೆ ಕಣ್ಣಿಟ್ಟಿದ್ದರು. ಅಪರಾಧ ಪ್ರಕರಣದಲ್ಲಿ ಭಾಗಿಯಾಗದಂತೆ ಸಾಕಷ್ಟು ಎಚ್ಚರಿಕೆಯನ್ನು ನೀಡಿದ್ದರು. ಆದರೆ, ಅವರ ವರ್ತನೆಯಲ್ಲಿ ಯಾವುದೇ ಬದಲಾವಣೆಗಳಾಗಿರಲಿಲ್ಲ.
ಈ ಹಿನ್ನಲೆ ಪೊಲೀಸರು ಮೇಲಧಿಕಾರಿಗಳಿಗೆ ಕಠಿಣ ಕ್ರಮಕ್ಕೆ ಮನವಿ ಮಾಡಿದ್ದರು. ಅದನ್ನು ಅರಿತ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಅವರು ಗಡಿಪಾರು ಆದೇಶ ಹೊರಡಿಸಿದರು. ಅದರಂತೆ, ಮಂಜು ನವಲೆ ಅವರನ್ನು ಆರು ತಿಂಗಳ ಅವಧಿಗೆ ಕೋಲಾರ ಜಿಲ್ಲೆಯ ಕೆಜಿಎಫ್ ಪ್ರದೇಶಕ್ಕೆ ಗಡಿಪಾರು ಮಾಡಿದರು. ಮಧು ಸಿಂಗ್ ಅವರನ್ನು ಮಂಡ್ಯ ಜಿಲ್ಲೆಗೆ ಗಡಿಪಾರು ಮಾಡಿ ಆದೇಶಿಸಿದರು.