ಹೊನ್ನಾವರದ ಕಾಸರಕೋಡು ಟೊಂಕಾ ಬಳಿ ಬಂದರು ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಈ ಕಾಮಗಾರಿಗೆ ಬಳಸುವ ಯಂತ್ರಗಳ ಸದ್ದಿಗೆ ಆ ಭಾಗದ ಮನೆಗಳು ಅಲ್ಲಾಡುತ್ತಿವೆ. ಯಂತ್ರದ ಆರ್ಭಟಕ್ಕೆ ಕಾಸರಕೋಡು ಟೊಂಕಾ ರಸ್ತೆ ಅಂಚಿನಲ್ಲಿ ಮನೆ ಮಾಡಿಕೊಂಡಿರುವ ಸೌಜನ್ಯ ತಾಂಡೇಲ್ ಅವರ ಶೌಚಾಲಯ ಕುಸಿದು ಬಿದ್ದಿದೆ.
ಹೊನ್ನಾವರದ ಇಕೋ ಬೀಚಿನಿಂದ ಕಾಸರಕೋಡು ಟೊಂಕಾಗೆ ಹೋಗುವ ರಸ್ತೆ ಅಂಚಿನಲ್ಲಿ ಸೌಜನ್ಯ ನಾಗರಾಜ ತಾಂಡೇಲ್ ಅವರು ವಾಸವಾಗಿದ್ದಾರೆ. 16 ವರ್ಷದ ಅವರು ಕಾಲೇಜು ವಿದ್ಯಾರ್ಥಿಯಾಗಿದ್ದು, ತಮಗಾದ ಸಮಸ್ಯೆ ವಿರುದ್ಧ ಧ್ವನಿ ಎತ್ತಿದ್ದಾರೆ. ಜೂನ್ 26ರ ಮಧ್ಯಾಹ್ನ ಶೌಚಾಲಯಕ್ಕೆ ಹೋದ ವೇಳೆಯಲ್ಲಿಯೇ ಶೌಚಾಲಯದ ಮೇಲ್ಚಾವಣಿ ಕುಸಿದು ಬಿದ್ದಿರುವುದಾಗಿ ಅವರು ದೂರು ನೀಡಿದ್ದಾರೆ. ಮೇಲ್ಚಾವಣಿ ಬಿದ್ದ ಪರಿಣಾಮ ತಮ್ಮ ಬುಜಕ್ಕೆ ಪೆಟ್ಟಾಗಿರುವ ಬಗ್ಗೆ ಅವರು ವಿವರಿಸಿದ್ದು, ಇದಕ್ಕಾಗಿ ಆಸ್ಪತ್ರೆ ಅಲೆದಾಟವನ್ನು ಮಾಡಿದ್ದಾರೆ.
ಹೊನ್ನಾವರದ ಇಕೋ ಬೀಚಿನಿಂದ ಕಾಸರಕೋಡು ಟೊಂಕಾಗೆ ಹೋಗುವ ರಸ್ತೆಯಲ್ಲಿ ಭಾರೀ ಪ್ರಮಾಣದ ವಾಹನಗಳು ಓಡಾಡುತ್ತಿವೆ. ಆ ಭಾಗದ ರಸ್ತೆ ಅಂಚಿನ ನಿವಾಸಿಗಳು ನಿತ್ಯ ಸಮಸ್ಯೆ ಅನುಭವಿಸುತ್ತಿದ್ದಾರೆ. ಹೊನ್ನಾವರ ಪೊರ್ಟ ಪ್ರೆವೆಟ್ ಲಿಮಿಟೆಡ್ ಕಂಪನಿ ಇಲ್ಲಿ ಬಂದರು ನಿರ್ಮಾಣ ಕೆಲಸ ಮಾಡುತ್ತಿದ್ದು, ಅದೇ ಜನರ ಸಮಸ್ಯೆಗೆ ಕಾರಣವಾಗಿದೆ. ಭಾರೀ ವಾಹನ ಓಡಾಟದ ರಸ್ತೆ ಹಾಳಾದ ಕಾರಣ ಅದರ ಗುಂಡಿ ಮುಚ್ಚಲು ಬಂದ ವಾಹನದ ವೈಬ್ರೇಶನ್’ಗೆ ತಮ್ಮ ಮನೆಯ ಶೌಚಾಲಯ ಮುರಿದ ಬಗ್ಗೆ ಸೌಜನ್ಯ ತಾಂಡೇಲ್ ಅವರು ದೂರಿದ್ದಾರೆ.
ಇನ್ನೂ ಅನೇಕ ದೊಡ್ಡ ದೊಡ್ಡ ವಾಹನಗಳು ಈ ಮಾರ್ಗದಲ್ಲಿ ಓಡಾಡುತ್ತಿದ್ದು, ಜನ ಸಮಸ್ಯೆ ಅನುಭವಿಸುತ್ತಿದ್ದಾರೆ. ಅದಕ್ಕೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ಶೌಚಾಲಯದ ಮೇಲ್ಚಾವಣಿ ಮುರಿದು ಬಿದ್ದಿದ್ದರಿಂದ ತಮಗೆ ನೋವಾಗಿರುವ ಜೊತೆ ಆರ್ಥಿಕ ನಷ್ಟವನ್ನು ಅನುಭವಿಸಿದ ಬಗ್ಗೆ ವಿವರಿಸಿದ್ದಾರೆ.