ಲೈಕು-ಶೇರು-ಕಮಂಟಿನ ಆಸೆಗಾಗಿ ಜೋಗ ಜಲಪಾತದ ಬಳಿ ಸರ್ಕಸ್ ಮಾಡಿದ್ದ ಮೂವರು ಯೂಟೂಬರ್ ವಿರುದ್ಧ ಸಿದ್ದಾಪುರ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ. `ಮಿಸ್ಟರ್ ಕನ್ನಡಿಗ’ ಖಾತೆಯಲ್ಲಿ ಪ್ರಸಾರವಾದ ಅಪಾಯಕಾರಿ ವಿಡಿಯೋದಲ್ಲಿ ಕಾಣಿಸಿಕೊಂಡ ಶಿವಮೊಗ್ಗದ ಭರತ ಗೌಡ, ಮದನ ಗೌಡ ಹಾಗೂ ಮೋಹನ ಗೌಡ ಅವರ ವಿರುದ್ಧ ಕಠಿಣ ಕ್ರಮವಾಗಿದೆ.
2026ರ ಜೂನ್ 25ರಂದು ಮಿಸ್ಟರ್ ಕನ್ನಡಿಗ ತಂಡದ ಶಿವಮೊಗ್ಗ ತೀರ್ಥಹಳ್ಳಿಯ ಜೋಗಿನಕೊಪ್ಪದ ಮೋಹನ ಶುಭಕರ ಗೌಡ ಹಾಗೂ ಅವರ ಸ್ನೇಹಿತರಾದ ಅದೇ ಊರಿನ ಭರತ ಗೌಡ ಹಾಗೂ ಮದನ ಗೌಡ ಅವರು ಜೋಗ ಜಲಪಾತಕ್ಕೆ ಬಂದಿದ್ದರು. ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನಿಂದ ಅವರು ಜಲಪಾತದ ಹಿಂದಿನ ಪ್ರದೇಶಕ್ಕೆ ಹೋಗಿದ್ದರು. ಅಲ್ಲಿ ಹೋಗದಂತೆ ಸೂಚನಾ ಫಲಕವಿದ್ದರೂ ನಿಯಮ ಮೀರಿ ಆ ಅಪಾಯಕಾರಿ ಸ್ಥಳ ತಲುಪಿದ್ದರು. ಅಲ್ಲಿ ಸಾಕಷ್ಟು ಸಮಯ ಮೋಜು-ಮಸ್ತಿ ಮಾಡಿದ ಆ ಮೂವರು ಅದನ್ನು ವಿಡಿಯೋ ಮಾಡಿದ್ದರು.
ಜೂನ್ 26ರಂದು ಆ ವಿಡಿಯೋವನ್ನು ತಮ್ಮ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಸಿದ್ದಾಪುರ ಪೊಲೀಸ್ ಠಾಣೆಯ ಸೋಶಿಯಲ್ ಮಿಡಿಯಾ ವಿಭಾಗದವರು ಆ ವಿಡಿಯೋ ನೋಡಿ, ಮೇಲಧಿಕಾರಿಗಳಿಗೆ ಮಾಹಿತಿ ನೀಡಿದರು. ಪಿಸೈ ಶಾಂತಿನಾಥ ಪಾಸಾನೆ ಅವರು ಸಹ ವಿಡಿಯೋ ನೋಡಿದರು. ಜೋಗದ ರಾಜಾ ಜಲಪಾತದ ಕಲ್ಲಿನ ಬಂಡೆ ಮೇಲೆ ಅತ್ಯಂತ ಅಪಾಯಕಾರಿಯಾಗಿ ವರ್ತಿಸಿದ್ದದನ್ನು ಗಮನಿಸಿದರು. ತಮ್ಮ ವ್ಯಾಪ್ತಿಗೆ ಬಂದು ಉದ್ದಟತನ ತೋರಿದವರ ವಿರುದ್ಧ ಕಠಿಣ ಕ್ರಮಕ್ಕೆ ನಿರ್ಣಯಿಸಿದರು. `ಈ ವಿಡಿಯೋ ನೋಡಿ ಅನೇಕರು ಅಲ್ಲಿ ಬರುವ ಸಾಧ್ಯತೆಯಿದೆ. ಅದರಿಂದ ಜನರ ಜೀವಕ್ಕೆ ಅಪಾಯವಾಗುವ ಸಾಧ್ಯತೆಯಿದೆ’ ಎಂದು ಪೊಲೀಸರು ಪ್ರಕರಣ ದಾಖಲಿಸಿದರು.