`ಸೌರ ದೀಪದ ನಿರಂತರ ಬಳಕೆಯಿಂದ ವ್ಯಕ್ತಿಯ ಉತ್ಪಾದಕ ಸಾಮರ್ಥ್ಯಗಳನ್ನು ಹೆಚ್ಚಿಸಲು ಸಾಧ್ಯ’ ಎಂದು ಶಿರಸಿ-ಸಿದ್ದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಅವರು ಹೇಳಿದ್ದಾರೆ. ಸೋಂದಾ ಕಮಟಗೇರಿಯಲ್ಲಿ ಸ್ಕೊಡ್‌ವೆಸ್ ಸಂಸ್ಥೆ ಆಯೋಜಿಸಿದ ಸೋಲಾರ್ ಗ್ರಾಮ ಯೋಜನೆಯಡಿ ಉಚಿತ ಸೌರ ದೀಪ ವಿತರಿಸಿ ಮಾತನಾಡಿದ ಅವರು `ಸರ್ಕಾರದಿಂದ ಉಚಿತ ವಿದ್ಯುತ್ ಒದಗಿಸಲಾಗುತ್ತಿದ್ದರೂ ಉತ್ತರ ಕನ್ನಡ ಜಿಲ್ಲೆಗೆ ಸೋಲಾರ್ ದೀಪಗಳೇ ಆಧಾರ’ ಎಂದಿದ್ದಾರೆ.
`ದಟ್ಟ ಕಾಡು ಕಣಿವೆಗಳಿಂದ ಆವೃತ್ತವಾದ ಉತ್ತರ ಕನ್ನಡ ಜಿಲ್ಲೆಯ ಹಲವಾರು ಕುಗ್ರಾಮಗಳಿಗೆ ನಿರಂತರ ವಿದ್ಯುತ್ ಸರಬರಾಜು ಮಾಡಲು ತಾಂತ್ರಿಕ ಅಡೆತಡೆಗಳು ಸಾಕಷ್ಟಿವೆ. ಇದರಿಂದ ಮಹಿಳೆಯರು, ವಿದ್ಯಾರ್ಥಿಗಳು, ಕೃಷಿಕರು, ಕಾರ್ಮಿಕರು ದೂರ ದಿನನಿತ್ಯದ ಚಟುವಟಿಕೆಗಳನ್ನು ಪೂರ್ತಿಗೊಳಿಸುವಲ್ಲಿ ಸಾಧ್ಯವಾಗುತ್ತಿಲ್ಲ. ಈ ಅಡಚಣೆಗಳು ಕೌಟುಂಬಿಕ ಪ್ರಗತಿಯ ಮೇಲೂ ಪರಿಣಾಮ ಬೀರುವಂತಾಗಿದ್ದು, ಇಂಥ ಎಲ್ಲಾ ಸಮಸ್ಯೆಗಳಿಗೆ ಸೌರ ಶಕ್ತಿ ಬಳಕೆಯೇ ಸೂಕ್ತ ಪರಿಹಾರ’ ಎಂದರು. `ಸೌರಶಕ್ತಿಯ ಬಳಕೆ ವಿದ್ಯುತ್ ಜಾಲದ ಮೇಲಿನ ಒತ್ತಡವನ್ನು ಕಡಿಮೆ ಮಾಡುವುದಲ್ಲದೇ ಮತ್ತು ಶುದ್ಧ ಇಂಧನದ ಬಳಕೆಯನ್ನು ಉತ್ತೇಜಿಸುವುದರಿಂದ ಪ್ರತಿಯೊಬ್ಬರೂ ಸೌರ ಶಕ್ತಿ ಬಳಕೆಗೆ ಹೆಚ್ಚಿನ ಆದ್ಯತೆ ನೀಡಬೇಕು’ ಎಂದು ಕರೆ ನೀಡಿದರು.
ಸ್ಕೊಡ್‌ವೆಸ್ ಸಂಸ್ಥೆಯ ಕಾರ್ಯವನ್ನು ಶ್ಲಾಘಿಸಿದ ಶಾಸಕರು `ಸಂಸ್ಥೆಯ ಸೋಲಾರ್ ಗ್ರಾಮ ಪರಿಕಲ್ಪನೆ ಗ್ರಾಮೀಣ ಅಭಿವೃದ್ಧಿ ಕ್ಷೇತ್ರದಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವುದರಿಂದ ಮಲೆನಾಡಿನ ತೀರಾ ಹಿಂದುಳಿದ ಎಲ್ಲಾ ಗ್ರಾಮಗಳಿಗೂ ಸೋಲಾರ್ ದೀಪ ಅಳವಡಿಸಲು ಅಗತ್ಯ ಕ್ರಮ ಜರುಗಿಸಿ’ ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಸ್ಕೊಡ್‌ವೆಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ವೆಂಕಟೇಶ ನಾಯ್ಕ ಅವರು `ಈಗಾಗಲೇ ಕೃಷಿ ಕೂಲಿಕಾರ್ಮಿಕರು ಹಾಗೂ ಹಿಂದುಳಿದ ವರ್ಗಗಳು ಹೆಚ್ಚಾಗಿರುವ ಆಯ್ದ 13 ಗ್ರಾಮಗಳ ಎಲ್ಲಾ ಮನೆಗಳಿಗೆ ಸೋಲಾರ್ ದೀಪಗಳನ್ನು ಅಳವಡಿಸಲಾಗಿದ್ದು, ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯಿತಿವಾರು ಹಳ್ಳಿಗಳನ್ನು ಗುರುತಿಸಿ ಸೌರ ದೀಪ ವಿತರಿಸುವ ಪ್ರಯತ್ನ ಮಾಡಲಾಗುತ್ತದೆ’ ಎಂದರು.
ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿದ್ದ ಸೋಂದಾ ಗ್ರಾಮ ಪಂಚಾಯಿತಿಯ ನಿಕಟಪೂರ್ವ ಉಪಾಧ್ಯಕ್ಷೆ ಭಾರತಿ ಗಣಪತಿ ಚೆನ್ನಯ್ಯ, ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಜಗದೀಶ ಗೌಡ, ಹುಲೇಕಲ್ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಖಾಸಿಮ್ ಸಾಬ್, ಸೋಂದಾ ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆ ಅಕ್ಷತಾ ಅಶೋಕ ಚೆನ್ನಯ್ಯ, ಪ್ರಮುಖರಾದ ಎಸ್ ಕೆ ಭಾಗ್ವತ್, ಅಶೋಕ ಮರಾಠೆ, ಬಾಲಚಂದ್ರ ಹೆಗಡೆ ಅವರು ಮಾತನಾಡಿದರು.
ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಗದೀಶ ಗೌಡ ಅವರ ಮನವಿಯ ಮೇರೆಗೆ ಗುರುತಿಸಲಾದ ಸೋಂದಾ ಕಮಟಗೇರಿಯ 35 ಮನೆಗಳಿಗೆ ಸ್ಕೊಡ್‌ವೆಸ್ ಸಂಸ್ಥೆಯಿoದ ಉಚಿತವಾಗಿ ಸೋಲಾರ್ ದೀಪಗಳನ್ನು ವಿತರಿಸಲಾಯಿತು. ಸೋಂದಾ ಗ್ರಾಮ ಪಂಚಾಯಿತಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪರಶುರಾಮ ಎಲ್ಲರನ್ನು ಸ್ವಾಗತಿಸಿದರು. ಸ್ಕೊಡ್‌ವೆಸ್ ಸಂಸ್ಥೆಯ ಯೋಜನಾ ಸಂಯೋಜಕ ಉಮೇಶ ಮರಾಠಿ ಅವರು ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.