ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ಸಹಕಾರಿ ಸಂಘಗಳ ವ್ಯವಹಾರಗಳ ಬಗ್ಗೆ ಹೆಚ್ಚಿನ ನಿಗಾವಹಿಸಬೇಕು’ ಎಂದು ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅವರು ಸಹಕಾರಿ ಸಂಘಗಳ ಉಪನಿಬಂಧಕರಿಗೆ ಸೂಚನೆ ನೀಡಿದ್ದಾರೆ. ಸಾರ್ವಜನಿಕರ ಠೇವಣಿಗೆ ಭದ್ರತೆ ನೀಡುವಂತೆ ಅವರು ಸೂಚಿಸಿದ್ದಾರೆ.
`ಡೀಸಿ ಕಚೇರಿಯಲ್ಲಿ ಸಭೆ ನಡೆಸಿದ ಅವರು ಕೆಲವು ಸಹಕಾರಿ ಸಂಘಗಳಲ್ಲಿನ ಅವ್ಯವಹಾರಗಳಿಂದ ಸಾರ್ವಜನಿಕರು ತಮ್ಮ ಠೇವಣಿ ಹಣವನ್ನು ಕಳೆದುಕೊಂಡಿದ್ದಾರೆ. ಇಂಥ ಘಟನೆಗಳನ್ನು ತಪ್ಪಿಸುವ ಸಲುವಾಗಿ ಸಹಕಾರಿ ಬ್ಯಾಂಕ್‌ಗಳು ನಿಯಮಾನುಸಾರ ಎಲ್ಲಾ ಅನುಮತಿಗಳನ್ನು ಪಡೆಯುವಂತೆ ನೋಡಿಕೊಳ್ಳಬೇಕು. ಅಲ್ಲಿನ ಆರ್ಥಿಕ ಚಟುವಟಿಕೆಗಳ ಬಗ್ಗೆ ಆಗಾಗ್ಗೆ ತಪಾಸಣೆಗಳನ್ನು ನಡೆಸಬೇಕು. ಆ ಮೂಲಕ ಸಾರ್ವಜನಿಕರ ಹಣಕ್ಕೆ ಅಗತ್ಯ ರಕ್ಷಣೆ ದೊರೆಯುವಂತೆ ನೋಡಿಕೊಳ್ಳಬೇಕು’ ಎಂದರು.
`ಮುoಡಗೋಡು, ಹಳಿಯಾಳ ಮತ್ತಿತರ ತಾಲೂಕುಗಳಲ್ಲಿ ಖಾಸಗಿ ಫೈನಾನ್ಸ್ ಗಳ ಹಾವಳಿ ಕುರಿತಂತೆ ದೂರುಗಳು ಬರುತ್ತಿದ್ದು, ಖಾಸಗಿ ಪೈನಾನ್ಸ್ ಗಳು ಆರ್ ಬಿ ಐ ಮಾರ್ಗಸೂಚಿಗಳನ್ನು ಪಾಲಿಸಿಕೊಂಡು ನಡೆಯುತ್ತಿರುವ ಬಗ್ಗೆ ಗಮನಿಸಬೇಕು. ವಿಧಿಸುವ ಬಡ್ಡಿ ದರಗಳ ಕುರಿತಂತೆ ಪರಿಶೀಲನೆ ನಡೆಸಬೇಕು. ಖಾಸಗಿ ಪೈನಾನ್ಸ್ ಸೇರಿದಂತೆ ಹಣಕಾಸು ಸಂಸ್ಥೆಗಳಲ್ಲಿ ಸಾರ್ವಜನಿಕರು ಸುರಕ್ಷಿತ ವ್ಯವಹಾರ ನಡೆಸುವ ಬಗ್ಗೆ ಹೆಚ್ಚಿನ ಸಂಖ್ಯೆಯಲ್ಲಿ ಅರಿವು ಮತ್ತು ಜಾಗೃತಿ ಕಾರ್ಯಕ್ರಮ ಆಯೋಜಿಸಬೇಕು’ ಎಂದು ನಿರ್ದೇಶನ ನೀಡಿದರು.
`ಜಿಲ್ಲೆಯಲ್ಲಿನ ಖಾಸಗಿ ಪೈನಾನ್ಸ್ ಸಂಸ್ಥೆಗಳು ಆರ್ ಬಿ ಐ ಮಾರ್ಗಸೂಚಿಯಡಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಪರಿಶೀಲಿಸಿ ಅನಧಿಕೃತ ಎಂದು ಕಂಡು ಬಂದಲ್ಲಿ ಅಂತಹ ಸಂಸ್ಥೆಗಳ ವಿರುದ್ದ ತಕ್ಷಣ ಪ್ರಕರಣ ದಾಖಲು ಮಾಡಬೇಕು’ ಎಂದು ಸೂಚಿಸಿದರು. `ಸಹಕಾರ ಸಂಘಗಳ ಅರ್ಥಿಕ ಅವ್ಯವಹಾರಗಳ ಕುರಿತು ಸಲ್ಲಿಕೆಯಾಗುವ ದೂರುಗಳನ್ನು ನಿಗಧಿತ ಕಾಲಾವಧಿಯಲ್ಲಿ ವಿಲೇಗೊಳಿಸುವುದರ ಜೊತೆಗೆ ಅಂತಹ ಸಂಸ್ಥೆಗಳಲ್ಲಿ ಸಾರ್ವಜನಿಕರ ಠೇವಣಿ ಮೊತ್ತ ಸುರಕ್ಷಿತವಾಗಿರುವಂತೆ ಅಗತ್ಯ ಎಚ್ಚರವಹಿಸಬೇಕು’ ಎಂದು ಸೂಚಿಸಿದರು. ಸಭೆಯಲ್ಲಿ ಜಿ ಪಂ ಸಿಇಓ ದಿಲೀಷ್ ಶಶಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ ಎನ್, ಉಪ ವಿಭಾಗಾಧಿಕಾರಿ ಶ್ರವಣ ಕುಮಾರ್, ಸಹಕಾರಿ ಸಂಘಗಳ ಉಪ ನಿಬಂಧಕಿ ತೇಜಸ್ವಿನಿ ಗೌಡ, ಲೀಡ್ ಬ್ಯಾಂಕ್ ಮೇನೇಜರ್ ರಾಜಪ್ಪ ಇತರರು ಇದ್ದರು.