ONE PLUS ಮೊಬೈಲ್ ಬಳಕೆದಾರರೊಬ್ಬರ ಮೊಬೈಲ್ ಆಟೋಮಿಟಿಕ್ ಆಗಿ ಅಪ್ಡೇಟ್ ಆಗಿದ್ದು, ಅದಾದ ನಂತರ ಅವರ ಬ್ಯಾಂಕ್ ಖಾತೆಯಲ್ಲಿದ್ದ ಹಣ ಬೇರೆಯವರ ಪಾಲಾಗಿದೆ. ಮೊಬೈಲ್ ಅಪ್ಟೇಟ್ ಆದ 30 ನಿಮಿಷದೊಳಗೆ ಅವರ ಹಣ ಕಾಣೆಯಾಗಿದ್ದು, ಶಿವಾನಂದ ಇಂಗಳಗಿ ಅವರು ದಿಕ್ಕು ತೋಚದೇ ಕೂತಿದ್ದಾರೆ.
ಜೊಯಿಡಾದ ರಾಮನಗರದ ಬಳಿ ಶಿವಾನಂದ ರುದ್ರಪ್ಪ ಇಂಗಳಗಿ ಅವರು ವಾಸವಾಗಿದ್ದಾರೆ. ಅವರು ONE PLUS NORD 3 LITE CE 5 ಮೊಬೈಲ್ ಬಳಸುತ್ತಿದ್ದಾರೆ. ಜೂನ್ 12ರಂದು ಅವರು ಗಣೇಶಗುಡಿಯಲ್ಲಿದ್ದಾಗ ಅವರ ಮೊಬೈಲ್ ಅಪ್ಟೇಡ್ ಆಗಿದೆ. ಸಾಪ್ಟವೇರ್ ಅಪ್ಡೇಟ್ ನಂತರ ಅವರ ಮೊಬೈಲ್ ಸ್ವಿಚ್ ಆಫ್ ಆಗಿದ್ದು, 30 ನಿಮಿಷದ ನಂತರ ಸ್ವಿಚ್ ಆನ್ ಆಗಿದೆ. ಆ ದಿನ ಮಧ್ಯಾಹ್ನ ಅವರು ಗೂಗಲ್ ಪೇ ಮೂಲಕ ಹಣ ವರ್ಗಾವಣೆಗೆ ಪ್ರಯತ್ನಿಸಿದ್ದಾರೆ. ಆಗ, ಅವರ ಎಸ್ ಬ್ಯಾಂಕ್ ಖಾತೆಯಲ್ಲಿ ಕೇವಲ 64ರೂ ಮಾತ್ರವಿರುವುದಾಗಿ ಕಾಣಿಸಿದೆ. ಕರ್ನಾಟಕ ಗ್ರಾಮೀಣ ಬ್ಯಾಂಕ್ ಖಾತೆ ಗಮನಿಸಿದಾಗ ಅಲ್ಲಿ 4312ರೂ ಮಾತ್ರ ಕಾಣಿಸಿದೆ.
ಮೊಬೈಲ್ ಅಪ್ಟೇಡ್ ಆಗುವಾಗ ಅವರಿಗೆ ಬ್ಯಾಂಕ್ ಮೆಸೆಜ್ ಬಾರದ ಹಾಗೇ ತಡೆಯುವ ಅಪ್ಲಿಕೇಶನ್ ಸಹ ಇನ್ಸಾಲ್ ಆಗಿರುವುದು ಅರಿವಿಗೆ ಬಂದಿದೆ. ಅವರ ಎಸ್ ಬ್ಯಾಂಕ್ ಖಾತೆಯಿಂದ ಆರ್ಯನ್ ನೌಷಾದ್ ನೇಸರ್ಗಿ ಎಂಬಾತರ ಖಾತೆಗೆ 96800ರೂ ಹಾಗೂ ಕರ್ನಾಕಟ ಗ್ರಾಮೀಣ ಬ್ಯಾಂಕ್ ಖಾತೆಯಿಂದ ಬಾಬುಸೋಣ ಸರದಾರ್ ಅವರ ಖಾತೆಗೆ 50 ಸಾವಿರ ರೂ ವರ್ಗವಾಗಿರುವುದು ಗೊತ್ತಾಗಿದೆ. ಆದರೆ, ಅವರಿಬ್ಬರು ಸಹ ಶಿವಾನಂದ ಇಂಗಳಗಿ ಅವರ ಪರಿಚಿತರಲ್ಲ. ಹೀಗಾಗಿ ಶಿವಾನಂದ ಅವರು ಎರಡು ಬ್ಯಾಂಕಿಗೆ ಹೋಗಿ ದೂರು ನೀಡಿದ್ದಾರೆ.
ಅದಾದ ನಂತರ ಅವರು ಸೈಬರ್ ಅಪರಾಧ ಪೊಲೀಸ್ ಠಾಣೆಗೂ ದೂರು ನೀಡಿದ್ದು, ಅಲ್ಲಿಂದಲೂ ಹಣ ಬಂದಿಲ್ಲ. ಹೀಗಾಗಿ ರಾಮನಗರ ಪೊಲೀಸ್ ಠಾಣೆಗೆ ಹೋಗಿ ತಮಗಾದ ಅನ್ಯಾಯದ ಬಗ್ಗೆ ದೂರಿದ್ದಾರೆ. ತಮ್ಮ ದುಡ್ಡು ಎಗರಿಸಿದವರಿಬ್ಬರನ್ನು ಪತ್ತೆ ಮಾಡಿ ಶಿಕ್ಷಿಸಬೇಕು ಎಂದು ಶಿವಾನಂದ ಇಂಗಳಗಿ ಅವರು ಮನವಿ ಮಾಡಿದ್ದಾರೆ.