ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯವರು ಭಟ್ಕಳ ಪೊಲೀಸ್ ಠಾಣೆಯಲ್ಲಿಯೇ ಪತ್ರಿಕಾ ದಿನಾಚರಣೆ ಆಚರಿಸಿದ್ದು, ಈ ವೇಳೆ ಗಣನೀಯ ಸೇವೆ ಸಲ್ಲಿಸಿದ ಪಿಸೈ ನವೀನ ನಾಯ್ಕ ಹಾಗೂ ಪೊಲೀಸ್ ಸಿಬ್ಬಂದಿ ದೀಪಕ ನಾಯ್ಕ ಅವರನ್ನು ಸನ್ಮಾನಿಸಿದ್ದಾರೆ. ಭಾನುವಾರ ನಡೆದ ಈ ಕಾರ್ಯಕ್ರಮದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಭಾಗವಹಿಸಿದ್ದಾರೆ.
`ಆಡಳಿತದಲ್ಲಿನ ಲೋಪದೋಷಗಳನ್ನು ಗುರುತಿಸಿ ಸಮಾಜವನ್ನು ಎಚ್ಚರಿಸುವಲ್ಲಿ ಮಾಧ್ಯಮಗಳ ಪಾತ್ರ ದೊಡ್ಡದು. ಸಮಾಜದ ಹಿತಕ್ಕಾಗಿ ಪೊಲೀಸರು ಹಾಗೂ ಪತ್ರಕರ್ತರು ಉತ್ತಮ ರೀತಿ ಕೆಲಸ ಮಾಡಬೇಕು’ ಎಂದು ಡಿವೈಎಸ್ಪಿ ಗಿರೀಶ ಬಿ ಅವರು ಹೇಳಿದರು. `ಪೊಲೀಸರ ಸೇವೆ ಗುರುತಿಸುವ ಪತ್ರಕರ್ತರ ಕಾರ್ಯದಿಂದ ಆತ್ಮವಿಶ್ವಾಸ ಹೆಚ್ಚಲಿದೆ’ ಎಂದವರು ಅಭಿಪ್ರಾಯಪಟ್ಟರು. ಸಿಪಿಐ ದಿವಾಕರ್ ಅವರು ಮಾತನಾಡಿ, `ಪೊಲೀಸ್ ಹಾಗೂ ಮಾಧ್ಯಮಗಳ ಜವಾಬ್ದಾರಿ ದೊಡ್ಡದಾಗಿದ್ದು, ಪ್ರತಿಯೊಬ್ಬರು ಜವಾಬ್ದಾರಿಯುತವಾಗಿ ವರ್ತಿಸಬೇಕು’ ಎಂದರು. ಪತ್ರಿಕಾ ಕ್ಷೇತ್ರದ ಸೇವೆಯನ್ನು ಅವರು ಶ್ಲಾಘಿಸಿದರು.
ಮುಖ್ಯಮಂತ್ರಿ ಪದಕಕ್ಕೆ ಆಯ್ಕೆಯಾಗಿರುವ ಪಿಸೈ ನವೀನ ನಾಯ್ಕ ಹಾಗೂ ಡಿಜಿ-ಐಜಿಪಿ ಪ್ರಶಸ್ತಿ ಪದಕಕ್ಕೆ ಭಾಜನರಾದ ಹೆಡ್ ಕಾನ್ಸ್ಟೇಬಲ್ ದೀಪಕ್ ನಾಯ್ಕ ಅವರು ಗೌರವ ಸ್ವೀಕರಿಸಿದರು. ಈ ವೇಳೆ ರಾಜ್ಯ ಪತ್ರಿಕಾ ವಿತರಕರ ಸಂಘದ ಅಧ್ಯಕ್ಷ ರಾಮಕೃಷ್ಣ ಭಟ್ಟ, ಮಂಜುನಾಥ್ ಮೊಗೇರ್, ದಯಾನಂದ ನಾಯ್ಕ್, ಗಣೇಶ್ ನಾಯ್ಕ ಯಶಶ್ರೀ ಆರ್ ಭಟ್ ಅವರನ್ನು ಈ ವೇದಿಕೆಯಲ್ಲಿ ಸನ್ಮಾನಿಸಲಾಯಿತು. ಸಂಘದ ಖಜಾಂಚಿ ಅರ್ಜುನ್ ಮಲ್ಯ ಅವರು ಸ್ವಾಗತಿಸಿದರು. ಸಂಘಟನೆಯ ಕರಾವಳಿ ಕರ್ನಾಟಕ ವಲಯದ ಅಧ್ಯಕ್ಷ ಕುಮಾರ್ ನಾಯ್ಕ್ ಅವರು ಪ್ರಸ್ತಾಪಿಸಿದರು. ಭಟ್ಕಳ ತಾಲೂಕು ಘಟಕದ ಅಧ್ಯಕ್ಷ ನಸಿ ಮುಲ್ಲಾ ಘನಿ ಕಾರ್ಯಕ್ರಮದ ನೇತೃತ್ವವಹಿಸಿದ್ದರು. ಸಂಘದ ಕಾರ್ಯದರ್ಶಿ ಉಲ್ಲಾಸ್, ಸದಸ್ಯರಾದ ಮೊಹಮ್ಮದ್ ಅಶ್ರಫ್ ಎಂ, ಗುರುಪ್ರಸಾದ್ ಇತರರು ಕಾರ್ಯಕ್ರಮದಲ್ಲಿದ್ದರು.