ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಪ್ರಮಾಣದ ಮಳೆಯಾಗುತ್ತಿದ್ದು, ಜಿಲ್ಲಾಡಳಿತ ರೆಡ್ ಅಲರ್ಟ ಘೋಷಿಸಿದೆ. ಸಮುದ್ರಕ್ಕೆ ಹೋಗದಂತೆ ಪ್ರವಾಸಿಗರಿಗೂ ಎಚ್ಚರಿಕೆ ನೀಡಿದೆ. ಅದಾಗಿಯೂ, ಭಾನುವಾರ ವಿವಿಧ ಕಡಲತೀರಗಳಲ್ಲಿ ಭಾರೀ ಪ್ರಮಾಣದ ಜನ ಕಾಣಿಸಿಕೊಂಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಮುಂದುವರೆಯುವ ಲಕ್ಷಣಗಳು ಹೆಚ್ಚಿವೆ. ಜೋರಾದ ಗಾಳಿಯೂ ಬೀಸುತ್ತಿದೆ. ಇದರಿಂದ ಅಪಾಯದ ಸಾಧ್ಯತೆಗಳು ಹೆಚ್ಚಿದ್ದು, ಜಿಲ್ಲಾಡಳಿತ ಸಾಕಷ್ಟು ಮುನ್ನಚ್ಚರಿಕೆವಹಿಸಿದೆ. ಜನ ಜಾಗೃತಿಗಾಗಿ ಅಪಾಯದಿಂದ ದೂರವಿರುವಂತೆ ಸೂಚನೆಯನ್ನು ರವಾನಿಸಿದೆ. ಆದರೆ, ಬೇರೆ ಬೇರೆ ಊರುಗಳಿಂದ ಬರುವ ಜನ ಇದಕ್ಕೆ ಖ್ಯಾರೇ ಅನ್ನುತ್ತಿಲ್ಲ. ರಕ್ಕಸ ಅಲೆಗಳ ನಡುವೆಯೇ ನಿಂತು ಸೆಲ್ಪಿ ಕ್ಲಿಕ್ಕಿಸಿಕೊಳ್ಳುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.
ಕಳೆದ ಎರಡು ದಿನಗಳಿಂದ ಕರಾವಳಿಯಲ್ಲಿ ಮಳೆ ಪ್ರಮಾಣ ಹೆಚ್ಚಾಗಿದೆ. ರಭಸ ಗಾಳಿ ಪರಿಣಾಮ ಕಡಲತೀರದ ವಾತಾವರಣವೂ ಶಾಂತವಾಗಿಲ್ಲ. ಅದಾಗಿಯೂ, ಸಮುದ್ರಕ್ಕೆ ಜನ ದೊಡ್ಡ ಪ್ರಮಾಣದಲ್ಲಿ ಬರುತ್ತಿದ್ದಾರೆ. ಅಪಾಯದ ಬಗ್ಗೆ ಅರಿವಿದ್ದರೂ ಅದನ್ನು ಲೆಕ್ಕಿಸದೇ ಮೋಜು-ಮಸ್ತಿಯಲ್ಲಿ ತೊಡಗಿದ್ದಾರೆ. ಕಡಲತೀರಗಳಲ್ಲಿ ಜೀವ ರಕ್ಷಕ ಸಿಬ್ಬಂದಿ ಕಾವಲಿದ್ದರೂ ಅವರ ನಿಯಂತ್ರಣಕ್ಕೆ ಪ್ರವಾಸಿಗರು ಸಿಗುತ್ತಿಲ್ಲ.
ಗೋಕರ್ಣದ ಓಂ ಬೀಚ್ ಬಳಿ ಕಲ್ಬಂಡೆ ಮೇಲೆ ನಿಂತು ಪ್ರವಾಸಿಗರು ಫೋಟೋ ಕ್ಲಿಕ್ಕಿಸುತ್ತಿದ್ದಾರೆ. ಕಲ್ಬಂಡೆ ಜಾರಿ ಅನಾಹುತ ನಡೆಯುವ ಸಾಧ್ಯತೆಯಿದ್ದರೂ ಅದನ್ನು ಮರೆತು ಮೈ ಮರೆಯುತ್ತಿದ್ದಾರೆ. ಗೋಕರ್ಣ ಮುಖ್ಯ ಕಡಲತೀರ, ಕುಡ್ಲೆ, ದುಬ್ಬನಸಶಿ ಭಾಗದಲ್ಲಿಯೂ ಅದೇ ರೀತಿ ಮುಂದುವರೆದಿದೆ.