ಉತ್ತರ ಕನ್ನಡ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಮುಂದಿನ ಎರಡು ದಿನಗಳ ಕಾಲ ಮಳೆ ಹೀಗೆ ಮುಂದುವರೆಯುವ ಲಕ್ಷಣಗಳಿವೆ. ಜುಲೈ 6ರ ಬೆಳಗ್ಗೆಯಿಂದ ಮಳೆ ಜೋರಾಗಿದ್ದು, ಜುಲೈ 7ರ ಬೆಳಗ್ಗೆಯವರೆಗೂ ಮಳೆ ಪ್ರಮಾಣ ಹೆಚ್ಚಾಗುವ ಮಾಹಿತಿ ಸಿಕ್ಕಿದೆ.
ಭಾರತೀಯ ಹವಾಮಾನ ಇಲಾಖೆ ನೀಡಿದ ಮಾಹಿತಿ ಅನ್ವಯ ಉತ್ತರ ಕನ್ನಡ, ಉಡುಪಿ ಹಾಗೂ ಮಂಗಳೂರು ಭಾಗದಲ್ಲಿ ಭಾರೀ ಪ್ರಮಾಣದ ಗಾಳಿ ಜೊತೆ ಮಳೆ ಬೀಳಲಿದೆ. ಹೀಗಾಗಿ ಈ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಈ ಭಾಗದಲ್ಲಿ ಪ್ರತಿ ಗಂಟೆಗೆ 50ಕಿಮೀ ವೇಗದಲ್ಲಿ ಗಾಳಿ ಬೀಸುವ ಲಕ್ಷಣಗಳಿವೆ. ಭಾರೀ ಮಳೆ ಕಾರಣ ಸಮುದ್ರದ ವಾತಾವರಣವೂ ಬದಲಾಗಿದ್ದು, ಅಲ್ಲಿ ತೆರಳುವುದು ಅಪಾಯಕಾರಿ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಜೊತೆ ಗುಡುಗು-ಸಿಡಿಲಿನ ಸಾಧ್ಯತೆಗಳಿವೆ. ಅದರಲ್ಲಿಯೂ, ಮುಖ್ಯವಾಗಿ ಕರಾವಳಿ ಭಾಗದಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದೆ. ಈ ಎಲ್ಲಾ ಹಿನ್ನಲೆ `ಜನ ಸುರಕ್ಷಿತ ಸ್ಥಳದಲ್ಲಿರಬೇಕು. ಅನಗತ್ಯವಾಗಿ ಮನೆಯಿಂದ ಹೊರ ಹೋಗಬಾರದು. ತಗ್ಗು ಪ್ರದೇಶದಲ್ಲಿ ವಾಸಿಸುವ ಜನ ಅಪಾಯ ಎದುರಾಗುವ ಮುನ್ನ ಸ್ಥಳಾಂತರವಾಗಬೇಕು. ವಿದ್ಯುತ್ ಕಂಬ, ಮರಗಳ ಅಡಿ ಆಶ್ರಯಪಡೆಯುವುದು ಅಪಾಯಕಾರಿ’ ಎಂದು ಸರ್ಕಾರ ಸೂಚಿಸಿದೆ.