ಕಳೆದ ಮೂರು ದಿನಗಳಿಂದ ಯಲ್ಲಾಪುರದ ಎಲ್ಲಡೆ ಗಾಳಿ-ಮಳೆ ಜೋರಾಗಿದ್ದು, ಲಕ್ಷಾಂತರ ರೂ ಮೌಲ್ಯದ ಆಸ್ತಿ-ಪಾಸ್ತಿಗೆ ಹಾನಿಯಾಗಿದೆ. ಜೊತೆಗೆ ವಿದ್ಯುತ್, ಮೊಬೈಲ್ ನೆಟ್‌ವರ್ಕ, ಇಂಟರ್‌ನೆಟ್ ವ್ಯವಸ್ಥೆಗಳಿಗೂ ಸಮಸ್ಯೆಯಾಗಿದೆ.
ಯಲ್ಲಾಪುರದ ಬಿಳಕಿ ಬಳಿಯ ಪಿಲ್ಲು ಸಾವೇರ ಸಿದ್ದಿ ಅವರ ಮನೆ ಮೇಲೆ ಮರ ಮುರಿದು ಬಿದ್ದಿದೆ. ಮನೆಯ ಮೇಲ್ಚಾವಣಿ ಮೇಲೆ ಮರ ಬಿದ್ದಿರುವುದರಿಂದ ಒಳಗೆ ನೀರು ನುಗ್ಗುತ್ತಿದೆ. ಮಣ್ಣಿನ ಮನೆಯ ಗೋಡೆಗಳು ಒದ್ದೆಯಾಗಿದೆ. ಕೋಳಿಕೇರಿಯ ಸುಭಾಷ ಯಲ್ಲಪ್ಪ ಹರಿಜನ ಅವರ ಮನೆ ಮೇಲೆಯೂ ಮರ ಬಿದ್ದಿದೆ. ಅವರ ಮನೆ ಮುರಿದ ಕಾರಣ ಕುಟುಂಬದವರು ಸಮಸ್ಯೆಗೆ ಸಿಲುಕಿದ್ದಾರೆ. ಮಳೆ ಕಾರಣ ಆ ಮನೆಯಲ್ಲಿದ್ದ ಮಕ್ಕಳ ಶಿಕ್ಷಣಕ್ಕೂ ಸಮಸ್ಯೆಯಾಗಿದೆ. ಬಸವಣ್ಣನಗರದ ಲಕ್ಷಿ ಸುಬ್ಬ ಮರಾಠಿ ಅವರ ಮನೆ, ತೋಟ, ಶೌಚಾಲಯದ ಮೇಲೆ ಭಾರೀ ಗಾತ್ರದ ಮರ ಮುರಿದು ಬಿದ್ದಿದೆ. ಹೀಗಾಗಿ, ಅಲ್ಲಿನ ಜನರು ಸಮಸ್ಯೆ ಅನುಭವಿಸುತ್ತಿದ್ದಾರೆ.
ಮನೆ ಮೇಲೆ ಮರ ಬಿದ್ದ ಪ್ರದೇಶಗಳಿಗೆ ಕಂದಾಯ ಅಧಿಕಾರಿಗಳು ಭೇಟಿ ನೀಡಿದ್ದಾರೆ. ವಿದ್ಯುತ್ ತಂತಿಗಳ ಮೇಲೆ ಮರ ಬಿದ್ದ ಕಡೆ ಹೆಸ್ಕಾಂ ಸಿಬ್ಬಂದಿ ಸಂಚರಿಸುತ್ತಿದ್ದಾರೆ. ಸಮಸ್ಯೆಗೆ ಸಿಲುಕಿದವರಿಗೆ ಸ್ಪಂದಿಸುವ ಪ್ರಯತ್ನ ಮುಂದುವರೆದಿದ್ದು, ಜನ-ದನಗಳಿಗೆ ಸಮಸ್ಯೆ ಆಗದ ಹಾಗೇ ಸುರಕ್ಷತಾ ಸ್ಥಳಗಳಲ್ಲಿ ಆಶ್ರಯಪಡೆಯುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.