ಮುಂಡಗೋಡಿನ ಟಿಬೆಟಿಯನ್ ಕಾಲೋನಿಯಲ್ಲಿ ಕಟ್ಟಡ ಕೆಲಸ ಮಾಡುತ್ತಿದ್ದ ಮಂಜುನಾಥ ಮಾದರ್ ಅವರು 2ನೇ ಮಹಡಿಯಿಂದ ಬಿದ್ದು ಸಾವನಪ್ಪಿದ್ದಾರೆ. ಆ ಕಟ್ಟಡ ನಿರ್ಮಾಣ ಗುತ್ತಿಗೆಪಡೆದ ಇಸ್ಮಾಯಲ್ ಸಾಬ್ ಅವರ ನಿರ್ಲಕ್ಷವೇ ಈ ಅವಘಡಕ್ಕೆ ಮುಖ್ಯ ಕಾರಣವಾಗಿದೆ.
ಮುಂಡಗೋಡು ಟಿಬೇಟಿಯನ್ ಕಾಲೋನಿಯ ಕ್ಯಾಂಪ್ 2ರಲ್ಲಿ ಕಟ್ಟಡ ನಿರ್ಮಾಣ ಕೆಲಸವೊಂದು ನಡೆಯುತ್ತಿದೆ. ಮುಂಡಗೋಡಿನ ಇಸ್ಮಾಯಲ್ ಸಾಬ್ ಅವರು ಆ ಕಟ್ಟಡದ ಉಸ್ತುವಾರಿವಹಿಸಿಕೊಂಡಿದ್ದಾರೆ. ಅಲ್ಲಿ ದುಡಿಯುವ ಕಾರ್ಮಿಕರಿಗೆ ಇಸ್ಮಾಯಲ್ ಸಾಬ್ ಅವರು ಸುರಕ್ಷತಾ ಸಾಮಗ್ರಿ ನೀಡದೇ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ. ಅದರಂತೆ, ಕಲಘಟಗಿಯ ಮಂಜುನಾಥ ಮಾದರ್ ಅವರನ್ನು ಇಸ್ಮಾಯಲ್ ಸಾಬ್ ಅವರು ಅಲ್ಲಿ ದುಡಿಸಿಕೊಂಡಿದ್ದಾರೆ.
ಜೂನ್ 26ರಂದು ಮಂಜುನಾಥ ಮಾದರ್ ಅವರು ಅಲ್ಲಿ ಕೆಲಸ ಮಾಡುತ್ತಿದ್ದಾಗ ಇಸ್ಮಾಯಲ್ ಸಾಬ್ ಅವರು ಮಂಜುನಾಥ ಮಾದರ್ ಅವರನ್ನು 2ನೇ ಮಹಡಿಗೆ ಕಳುಹಿಸಿದರು. ಅಲ್ಲಿ ಕೆಲಸ ಮಾಡುವಾಗ ಮಂಜುನಾಥ ಮಾದರ್ ಅವರು ಕೆಳಗೆ ಬಿದ್ದು ಗಾಯಗೊಂಡರು. ತಕ್ಷಣ ಅವರನ್ನು ಮುಂಡಗೋಡಿನ ಡಾ ಭರತ್ ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ಪ್ರಾಥಮಿಕ ಚಿಕಿತ್ಸೆಕೊಡಿಸಿ ಹುಬ್ಬಳ್ಳಿಯ ಕಿಮ್ಸ್’ಗೆ ದಾಖಲು ಮಾಡಲಾಯಿತು.
ಆದರೆ, ಚಿಕಿತ್ಸೆ ಫಲಕಾರಿಯಾಗದೇ ಜುಲೈ 5ರ ರಾತ್ರಿ ಮಂಜುನಾಥ ಮಾದರ್ ಅವರು ಸಾವನಪ್ಪಿದರು. ಪತಿಯ ಸಾವಿನ ಬಗ್ಗೆ ಶಂಕ್ರವ್ವ ಮಾದರ್ ಅವರು ಪೊಲೀಸರಿಗೆ ವಿವರಿಸಿ, ದೂರು ನೀಡಿದರು.