ಉತ್ತರ ಕನ್ನಡ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಅಂಕೋಲಾದ ಹಾರವಾಡದಲ್ಲಿ ವಿವಿಧ ಅವಘಡಗಳು ನಡೆದಿವೆ. ಬೀಸುತ್ತಿರುವ ಗಾಳಿ ಹಾಗೂ ಮಳೆ ಆರ್ಭಟಕ್ಕೆ ಜನ ಆತಂಕದಲ್ಲಿದ್ದಾರೆ.
ಹಾರವಾಡದಲ್ಲಿನ ಎರಡು ಮನೆಗಳ ಛಾವಣಿ ಹಾರಿ ಹೋಗಿದೆ. ಸಮುದ್ರದ ಅಲೆಗಳು ದಡಕ್ಕೆ ಅಪ್ಪಳಿಸಿದ ರಭಕ್ಕೆ ಕಡಲ ಕೊರೆತ ಉಂಟಾಗಿದೆ. ಹಾರವಾಡದ ಸತೀಶ ಹರಿಕಂತ್ರ ಮತ್ತು ಸುಮಿತ್ರ ಹರಿಕಂತ್ರ ಅವರ ಮನೆಗಳು ಅಪಾಯದ ಅಂಚಿನಲ್ಲಿದ್ದು, ಕುಸಿಯುವ ಸಾಧ್ಯತೆ ಹೆಚ್ಚಿದೆ. ಸದ್ಯ ಕುಟುಂಬದವರು ಆ ಮನೆ ಖಾಲಿ ಮಾಡಿ ಸುರಕ್ಷಿತ ಸ್ಥಳಕ್ಕೆ ಹೋಗಿದ್ದಾರೆ.
ಕಂದಾಯ ಇಲಾಖೆ, ಗ್ರಾಮ ಪಂಚಾಯಿತಿ ಹಾಗೂ ಬಂದರು ಇಲಾಖೆಯ ಅಧಿಕಾರಿಗಳು ಮನೆಯಿದ್ದ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ. ಹಾರವಾಡ ಭಾಗದಲ್ಲಿ ಕಡಲಕೊರೆತ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದನ್ನು ಅಧಿಕಾರಿಗಳು ಗಮನಿಸಿದ್ದಾರೆ. `ಇಲ್ಲಿ ತಾತ್ಕಾಲಿಕ ಪರಿಹಾರದ ಬದಲು ಸಮಸ್ಯೆಯನ್ನು ಶಾಶ್ವತವಾಗಿ ದೂರ ಮಾಡಲು ಸಮುದ್ರ ದಡಕ್ಕೆ ರಕ್ಷಣಾ ತಡೆಗೋಡೆ ನಿರ್ಮಿಸಬೇಕು ಎಂದು ಜನ ಆಗ್ರಹಿಸಿದ್ದಾರೆ.