ಸ್ನೇಹಿತನಿಗೆ ಸಹಾಯ ಮಾಡಲು ಪೊಲೀಸ್ ಠಾಣೆಗೆ ಬಂದಿದ್ದ ಯುವತಿಯ ಫೋನ್ ನಂ ಪಡೆದಿದ್ದ ದಾಂಡೇಲಿಯ ಪೊಲೀಸರಿಬ್ಬರು ಆಕೆಯನ್ನು ಲಾಡ್ಜಿಗೆ ಕರೆದಿದ್ದಾರೆ. ಮಹಂತೇಶ ಹಾಗೂ ಇಮ್ರಾನ್ ಎಂಬಾತರು ಆ ಯುವತಿಗೆ ಕೆಟ್ಟ ಕೆಟ್ಟ ಮೆಸೆಜ್ ಸಹ ಮಾಡಿದ್ದಾರೆ.
ಜುಲೈ 4ರಂದು ಅಪಘಾತಕ್ಕೀಡಾದ ಬೈಕ್ ಬಿಡಿಸಿಕೊಳ್ಳಲು ಯುವತಿಯೊಬ್ಬರುದಾಂಡೇಲಿ ಪೊಲೀಸ್ ಠಾಣೆಗೆ ಹೋಗಿದ್ದರು. 18 ವರ್ಷದ ಯುವತಿಯ ಸ್ನೇಹಿತನ ಬೈಕ್ ಪೊಲೀಸ್ ಠಾಣೆಯಲ್ಲಿದ್ದು, ಅದನ್ನು ಅವರು ಬಿಡಿಸಿಕೊಂಡಿದ್ದರು. ಈ ವೇಳೆ ಅಲ್ಲಿದ್ದ ಪೊಲೀಸರು ಯುವತಿಯ ಫೋನ್ ನಂ ಪಡೆದಿದ್ದರು. ಅದಾಗಿ ಕೆಲ ಸಮಯದ ನಂತರ ಆ ಯುವತಿಗೆ ಅಪರಿಚಿತ ಸಂಖೆಯಿAದ ಫೋನ್ ಹಾಗೂ ಮೆಸೆಜ್ ಬರಲು ಶುರುವಾದವು. ವಿಚಾರಿಸಿದಾಗ ಅದು ದಾಂಡೇಲಿ ಪೊಲೀಸ್ ಠಾಣೆಯ ಸಿಬ್ಬಂದಿ ಮಹಂತೇಶ್ ಹಾಗೂ ಇಮ್ರಾನ್ ಅವರದ್ದು ಎಂದು ಅರಿವಾಯಿತು.
ವಾಟ್ಸಪ್ ಚಾಟ್ ಮಾಡಿದ ಅವರಿಬ್ಬರು ಯುವತಿ ಜೊತೆ ಕೆಟ್ಟದಾಗಿ ಮಾತನಾಡಿದರು. ಫೋನ್ ಮಾಡಿಯೂ ಕೆಟ್ಟ ಕೆಟ್ಟ ಶಬ್ದಗಳ ಬಳಕೆ ಮಾಡಿದರು. `ಲಾಡ್ಜಿಗೆ ಬಾ’ ಎಂದು ಪೊಲೀಸರು ಯುವತಿಗೆ ಮೆಸೆಜ್ ಮಾಡಿದ್ದು, ಅದನ್ನು ಯುವತಿ ಸಹಿಸಲಿಲ್ಲ. `ಅಪಘಾತಕ್ಕೀಡಾದ ಬೈಕ್ ಬಿಟ್ಟು ಕೊಡಲು ಪೊಲೀಸರು ಹಣಪಡೆದಿದ್ದಾರೆ. ಜೊತೆಗೆ ತನ್ನ ಫೋನ್ ನಂ ದುರ್ಬಳಕೆ ಮಾಡಿಕೊಂಡು ಅಶ್ಲೀಲ ಮೆಸೆಜ್ ಮಾಡಿದ್ದಾರೆ’ ಎಂದು ಆ ಯುವತಿ ದಾಂಡೇಲಿ ಪೊಲೀಸ್ ಠಾಣೆಗೆ ದೂರು ನೀಡಿದರು. ಆದರೆ, ಅಲ್ಲಿ ಯಾವ ಕ್ರಮವೂ ಆಗಲಿಲ್ಲ.
ಈ ಹಿನ್ನಲೆ ಕಾರವಾರಕ್ಕೆ ಆಗಮಿಸಿದ ಯುವತಿ ತನಗಾದ ನೋವಿನ ಬಗ್ಗೆ ಪೊಲೀಸ್ ಅಧೀಕ್ಷಕರಲ್ಲಿ ಹೇಳಿಕೊಂಡರು. ನಂತರ ಮಹಿಳಾ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದರು. ಸದ್ಯ ಯುವತಿಗೆ ಅಶ್ಲೀಲ ಮೆಸೆಜ್ ಮಾಡಿದ ಪೊಲೀಸರಿಬ್ಬರ ವಿಚಾರಣೆ ನಡೆದಿದೆ. ಕೊಂಕಣಿ ಭಾಷೆಯಲ್ಲಿ ಮೆಸೆಜ್ ಮಾಡಿದ ಬಗ್ಗೆ ಮಾಹಿತಿ ಸಿಕ್ಕಿದೆ.