`ವಿದ್ಯಾರ್ಥಿಗಳು ಅಂಕಗಳಿಸುವ ಉದ್ದೇಶದಿಂದ ಓದದೇ, ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳುವುದಕ್ಕಾಗಿ ವಿದ್ಯಾರ್ಜನೆ ಮಾಡಬೇಕು’ ಎಂದು ಕಾರವಾರದ ಓ ಎಸ್ ಜಿ ಗ್ರೂಪ್ ಅಧ್ಯಕ್ಷ ಪವನ ಸಾವಂತ ಅವರು ಹೇಳಿದ್ದಾರೆ. ಅಸ್ನೋಟಿ ಶಿವಾಜಿ ವಿದ್ಯಾಮಂದಿರದಲ್ಲಿ ನಡೆದ ಪ್ರತಿಭಾ ಪುರಸ್ಕಾರದಲ್ಲಿ ಭಾಗಿಯಾದ ಅವರು ವಸತಿ ನಿಲಯಕ್ಕೆ ವಿವಿಧ ಸಾಮಗ್ರಿ ವಿತರಿಸಿ ಮಾತನಾಡಿದ್ದು, `ಕಠಿಣ ಪರಿಶ್ರಮ ಹಾಗೂ ಆತ್ಮ ವಿಶ್ವಾಸವೇ ಯಶಸ್ಸಿನ ಸೂತ್ರ’ ಎಂದು ಅವರು ವಿವರಿಸಿದ್ದಾರೆ.
ಶಿಕ್ಷಣಕ್ಕೆ ಸಹಾಯ ಮಾಡುವ ಜೊತೆಗೆ ಸಮಾಜಮುಖಿ ಕಾರ್ಯ ಮಾಡುತ್ತಿರುವ ಓ ಎಸ್ ಜಿ ಗ್ರೂಪ್ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರಕ್ಕೂ ನೆರವು ನೀಡಿದೆ. ಅಲ್ಲಿರುವ ಬಾಲಕಿಯರ ವಸತಿ ನಿಲಯಕ್ಕೆ ಅಗತ್ಯವಿರುವ ಕಿರಾಣಿ ಸಾಮಗ್ರಿಗಳನ್ನು ವಿತರಿಸಿದೆ. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಇಂಜಿನಿಯರ್ ಪವನ ಸಾವಂತ ಅವರು ಮಕ್ಕಳಲ್ಲಿ ಸ್ಪೂರ್ತಿ ತುಂಬಿದ್ದಾರೆ. `ಬಡ ಮಕ್ಕಳ ಶೈಕ್ಷಣಿಕ ನೆರವಿಗೆ ನಾವು ಸದಾ ಬದ್ಧ’ ಎಂದು ಅವರು ಘೋಷಿಸಿದ್ದಾರೆ. ಈ ವೇದಿಕೆಯಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ಮಕ್ಕಳನ್ನು ಅವರು ಗೌರವಿಸಿದ್ದಾರೆ.
ಓ ಎಸ್ ಜಿ ಗ್ರೂಪ್ ಚಾಂಪಿಯನ್ ಚಂದ್ರಶೇಖರ, ಗ್ರೂಪ್ ಕಾರ್ಯದರ್ಶಿ ನಾಗಪ್ಪ ನಾಯ್ಕ ಶಾಲೆಯ ನಿವೃತ್ತ ಮುಖ್ಯಾಧ್ಯಾಪಕರಾದ ದಿನೇಶ್ ಗಾಂವಕರ ಅವರು ಈ ವೇಳೆ ಮಾತನಾಡಿದ್ದಾರೆ. ಈ ವೇಳೆ ದಾನಿಗಳು ಕೆರಿಯರ್ ಮಾರ್ಗದರ್ಶನ ಪುಸ್ತಕಗಳು ಮತ್ತು ಸ್ಯಾನಿಟರಿ ಪ್ಯಾಡ್‌ಗಳನ್ನು ವಿತರಿಸಿದ್ದಾರೆ. ಪ್ರಜ್ಞಾ ವೇಳಿಪ ಮತ್ತು ಅವರ ಸಂಗಡಿಗರು ಪ್ರಾರ್ಥನಾ ಗೀತೆ ಹಾಡಿದರು. ಶಾಲಾ ಮುಖ್ಯಾಧ್ಯಾಪಕ ಗಣೇಶ ಬಿಷ್ಟಣ್ಣನವರ ಅವರು ಅತಿಥಿಗಳನ್ನು ಸ್ವಾಗತಿಸಿದರು. ಶಿಕ್ಷಕ ವಿಜಯಕುಮಾರ್ ನಾಯ್ಕ ಅವರು ವಂದಿಸಿದರು.