ಸರ್ಕಾರಿ ಪದವಿ ಕಾಲೇಜಿನ ಲೆಕ್ಕಪತ್ರಗಳನ್ನು ಆಡಿಟ್ ಮಾಡಲು ಆಗಮಿಸಿದ್ದ ಅಧಿಕಾರಿಯೊಬ್ಬರು 1 ಲಕ್ಷ ರೂ ಲಂಚ ಕೇಳಿದ್ದು, ಹಣಪಡೆಯುವಾಗ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ. ಅಂಕೋಲಾದ ಸರ್ಕಾರಿ ಪದವಿ ಕಾಲೇಜಿನ ಆಡಿಟ್ ಮಾಡಲು 80 ಸಾವಿರ ರೂ ಹಣಪಡೆಯುತ್ತಿದ್ದ ಶ್ರೀಧರ್ ಎಂಬಾತರು ಜೈಲು ಸೇರಿದ್ದಾರೆ.
ಅಂಕೋಲಾದ ಸರ್ಕಾರಿ ಪದವಿ ಕಾಲೇಜಿನ ಆಡಿಟ್ ಪ್ರಕ್ರಿಯೆಗಾಗಿ ಶ್ರೀಧರ್ ಎಂಬಾತರು ನಿಯೋಜನೆಗೊಂಡಿದ್ದರು. ಲೆಕ್ಕ ಪರಿಶೀಲನೆಗಾಗಿ ಅವರು 1 ಲಕ್ಷ ರೂ ಬೇಡಿದ್ದರು. ಕಾಲೇಜು ಪ್ರಾಚಾರ್ಯೆ ಪ್ರತಿಭಾ ಪಾಟೀಲ್ ಅವರಿಗೆ ಹಣ ನೀಡುವ ಮನಸ್ಸಿರಲಿಲ್ಲ. ಹೀಗಾಗಿ ಅವರು ಲೋಕಾಯುಕ್ತರಿಗೆ ದೂರು ನೀಡಿದ್ದು, 80 ಸಾವಿರ ರೂ ಹಣಪಡೆಯುವಾಗ ಲೋಕಾಯುಕ್ತರು ದಾಳಿ ಮಾಡಿದ್ದಾರೆ. ಮೊದಲು ಭಟ್ಕಳಕ್ಕೆ ಆಗಮಿಸಿ ಹಣ ಕೊಡುವಂತೆ ಹೇಳಿದ್ದ ಆಡಿಟ್ ಅಧಿಕಾರಿ ಶ್ರೀಧರ್, ನಂತರ ಬೈಂದೂರಿನಲ್ಲಿ ಹಣಪಡೆಯುವಾಗ ಸಿಕ್ಕಿ ಬಿದ್ದಿದ್ದಾರೆ.
ಹಣಪಡೆದ ಶ್ರೀಧರ್ ಓಡಿ ಹೋಗುವ ಪ್ರಯತ್ನ ಮಾಡಿದ್ದು, ಲೋಕಾಯುಕ್ತ ಕಾರವಾರ ಡಿವೈಎಸ್ಪಿ ಧನ್ಯಾ ನಾಯಕ, ಇನ್ಸಪೆಕ್ಟರ್ ವಿನಾಯಕ ಬಿಲ್ಲವ ನೇತೃತ್ವದ ತಂಡ ಅವರನ್ನು ಬೆನ್ನಟ್ಟಿ ಹಿಡಿದಿದೆ. ಶ್ರೀಧರ ಅವರ ಬ್ಯಾಗಿನಲ್ಲಿ 2.60 ಲಕ್ಷ ರೂ ಸಿಕ್ಕಿದೆ. ಕಾರವಾರ, ಮಂಕಿ, ಭಟ್ಕಳ ಪದವಿ ಕಾಲೇಜಿನ ಆಡಿಟ್ ಮಾಡಿ ಅಲ್ಲಿಯೂ ಹಣಕ್ಕೆ ಬೇಡಿಕೆಯಿಟ್ಟಿರುವ ಸಾಧ್ಯತೆಯಿದೆ. ಸದ್ಯ ನ್ಯಾಯಾಲಯ ಆಡಿಟ್ ಅಧಿಕಾರಿಗೆ ನ್ಯಾಯಾಂಗ ಬಂಧನವಿಧಿಸಿದೆ.