ತಂಗಿಗೆ ಮೆಸೆಜ್ ಮಾಡುವುದನ್ನು ಪ್ರಶ್ನಿಸಿದ ಶಿರಸಿಯ ಫೈಜಾನ್ ಶೇಖ್ ಅವರಿಗೆ ನಾಲ್ವರು ಸೇರಿ ಹೊಡೆದಿದ್ದಾರೆ. ಆ ನೋವು ಸಹಿಸದ ಫೈಜಾನ್ ಶೇಖ್ ಅವರು ಹೊಡೆದವರ ವಿರುದ್ಧ ಪೊಲೀಸ್ ದೂರು ನೀಡಿದ್ದಾರೆ.
ಶಿರಸಿಯ ಕಸ್ತೂರಿಬಾ ನಗರದಲ್ಲಿ ಫೈಜಾನ್ ಅಲ್ತಾಫ್ ಶೇಖ್ ಅವರು ವಾಸವಾಗಿದ್ದಾರೆ. 18 ವರ್ಷದ ಅವರು ಕಾಲೇಜು ವಿದ್ಯಾರ್ಥಿಯಾಗಿದ್ದು, ಅವರ ಚಿಕ್ಕಪ್ಪನ ಮಗಳಾದ ಗುಲೂಪ್ ಶಾ ಅವರಿಗೆ ಶಿರಸಿಯ ಅಮೀನ್ ಸೂಪರ್ ಅವರು ಪದೇ ಪದೇ ಮೆಸೆಜ್ ಮಾಡಿದ್ದಾರೆ. ಈ ವಿಷಯ ಫೈಜಾನ್ ಶೇಖ್ ಅವರಿಗೆ ಗೊತ್ತಾಗಿದ್ದು, ಅಮೀನ್ ಸೂಪರ್ ಅವರಿಗೆ ಫೈಜಾನ್ ಶೇಖ್ ಅವರು ಎಚ್ಚರಿಕೆ ನೀಡಿದ್ದಾರೆ.
`ತಂಗಿಗೆ ಮತ್ತೆ ಮೆಸೆಜ್ ಮಾಡಬೇಡ’ ಎಂದು ಸೂಚಿಸಿದ್ದಾರೆ. `ಮತ್ತೆ ಮೆಸೆಜ್ ಮಾಡಿದರೆ ಪೊಲೀಸ್ ಕಂಪ್ಲೆಟ್ ಕೊಡುವೆ’ ಎಂದು ಹೆದರಿಸಿದ್ದಾರೆ. ಇದರಿಂದ ಅಮೀನ್ ಸೂಪರ್ ಅವರು ಸಿಟ್ಟಾಗಿದ್ದಾರೆ. ಹೀಗಿರುವಾಗ, ಜುಲೈ 4ರಂದು ಫೈಜಾನ್ ಶೇಕ್ ಅವರಿಗೆ ಅವರ ಸ್ನೇಹಿತ ಅಪ್ಜಲ್ ಫೋನ್ ಮಾಡಿದ್ದಾರೆ. `ಬಹಳ ದಿನವಾಯಿತು. ಮಾತನಾಡೋಣ ಬಾ’ ಎಂದು ಕರೆದಿದ್ದಾರೆ. ಅದರಂತೆ, ಆ ದಿನ ರಾತ್ರಿ ಫೈಜಾನ್ ಶೇಖ್ ಅವರು ಅರ್ಬನ್ ಸರ್ಕಲ್ ಬಳಿ ಹೋಗಿದ್ದಾರೆ.
ಆಗ ಅಲ್ಲಿ ಸ್ಕೂಟರ್ ಮೇಲೆ ಐಮನ್ ಸೂಪರ್ ಹಾಗೂ ಸಾಕೀಬ್ ಆನವಟ್ಟಿ, ಸಾದ್ ಎಂಬಾತರು ಆಗಮಿಸಿದ್ದಾರೆ. ಅವರೆಲ್ಲರೂ ಸೇರಿ ಗಲಾಟೆ ಶುರು ಮಾಡಿದ್ದಾರೆ. ತಾವು ಧರಿಸಿದ್ದ ಜಾಕೇಟ್’ನ್ನು ಫೈಜಾನ್ ಅವರ ಮುಖಕ್ಕೆ ಮುಚ್ಚಿ ಹಿಗ್ಗಾಮುಗ್ಗ ಥಳಿಸಿದ್ದಾರೆ. ನೋವಿನಿಂದ ಬಳಲಿದ ಫೈಜಾನ್ ಅವರು ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋಗಿದ್ದಾರೆ.