ಶಿರಸಿಯಲ್ಲಿ ವಾಹನ ತಪಾಸಣೆ ಮಾಡುತ್ತಿದ್ದ ಪೊಲೀಸರ ಮೇಲೆ ಗಾಂಧೀನಗರದ ರಾಘು ಕಲ್ಗುಟ್ರ ಅವರು ಸ್ಕೂಟಿ ಹಾಯಿಸಿದ್ದಾರೆ. ಪೊಲೀಸ್ ಸಿಬ್ಬಂದಿಯೊಬ್ಬರು ಬಿದ್ದು ಗಾಯಗೊಂಡಿದ್ದು, ಆಸ್ಪತ್ರೆ ಸೇರಿದ್ದಾರೆ.
ಶಿರಸಿ ಸಂಚಾರ ಠಾಣೆಯ ಎಸೈ ದಾಕು ಹೊಸಕಟ್ಟಾ ಅವರು ಶಿರಸಿಯ ಮಿರ್ಜಾನಕರ ಪೆಟ್ರೊಲ್ ಬಂಕಿನ ಬಳಿ ವಿವಿಧ ವಾಹನ ತಪಾಸಣೆ ಮಾಡುತ್ತಿದ್ದರು. ಪೊಲೀಸ್ ಸಿಬ್ಬಂದಿ ಬಸವರಾಜ ಇ ಪಿ ಹಾಗೂ ಚಂದ್ರಶೇಖರ ನಾಯ್ಕ ಅವರು ವಾಹನಗಳಿಗೆ ಕೈ ಮಾಡುವ ಕೆಲಸ ನಿರ್ವಹಿಸುತ್ತಿದ್ದರು. ಜುಲೈ 4ರಂದು ಕಾಮತ್ ಹೊಟೇಲ್ ಕ್ರಾಸ್ ಕಡೆಯಿಂದ ಮಿರ್ಜಾನಕರ್ ಪೆಟ್ರೊಲ್ ಬಂಕ್ ಮಾರ್ಗವಾಗಿ ಶಿವಾಜಿ ಚೌಕದ ಕಡೆಗೆ ಗಾಂಧೀನಗರದ ರಾಘು ಕಲ್ಗುಟ್ರ ಅವರು ಸ್ಕೂಟಿ ಓಡಿಸಿಕೊಂಡು ಬರುತ್ತಿದ್ದರು. ರಾಘು ಕಲ್ಗುಟ್ರ ಅವರು ಹೆಲ್ಮೆಟ್ ಧರಿಸದ ಕಾರಣ ಪೊಲೀಸರು ಅವರ ಸ್ಕೂಟಿಗೆ ಕೈ ಮಾಡಿದರು. ಆದರೆ, ಅವರು ಸ್ಕೂಟಿ ನಿಲ್ಲಿಸದೇ ಮುನ್ನುಗ್ಗಿ ಬಂದಿದ್ದು, `ರಾಘು ಕಂಬಳಿ ಸ್ಕೂಟಿ ನಿಲ್ಲಿಸು’ ಎಂದು ಪೊಲೀಸರು ಕೂಗಿದರು. ಆಗ, ಅವರು ಸ್ಕೂಟಿ ನಿಲ್ಲಿಸಿದರು.
ಪೊಲೀಸರು ಸ್ಕೂಟಿ ಚಾಲಕನ ಬಳಿ ಹೋದಾಗ ರಾಘು ಕಲ್ಗುಟ್ರ ಅವರು ಜೋರಾಗಿ ಬೊಬ್ಬೆ ಹೊಡೆದರು. `ನನ್ನ ಸ್ಕೂಟಿ ನಿಲ್ಲಿಸಲು ಅಧಿಕಾರ ಕೊಟ್ಟವರು ಯಾರು?’ ಎಂದು ಪ್ರಶ್ನಿಸಿದರು. ಮತ್ತೆ ಸ್ಕೂಟರನ್ನು ಮುನ್ನುಗ್ಗಿಸಲು ಪ್ರಯತ್ನಿಸಿದಾಗ ಬಸವರಾಜ ಇಪಿ ಅವರು ಅದನ್ನು ತಡೆದರು. ಅದರಿಂದ ಸಿಟ್ಟಾದ ರಾಘು ಕಲ್ಗುಟ್ರ ಅವರು ಬಸವರಾಜ ಇಪಿ ಅವರ ಮೇಲೆ ಸ್ಕೂಟಿ ಹಾಯಿಸಿ ಪರಾರಿಯಾದರು. ನೆಲಕ್ಕೆ ಬಿದ್ದ ಬಸವರಾಜ ಅವರನ್ನು ಎಸೈ ದಾಕು ಹೊಸಕಟ್ಟಾ ಹಾಗೂ ಮತ್ತೊಬ್ಬ ಪೊಲೀಸ್ ಸಿಬ್ಬಂದಿ ಚಂದ್ರಶೇಖರ ನಾಯ್ಕ ಅವರು ಮೇಲೆತ್ತಿದರು. ಕೈ-ಕಾಲಿಗೆ ಗಾಯವಾಗಿದ್ದ ಬಸವರಾಜ ಅವರು ಆಸ್ಪತ್ರೆಗೆ ಹೋಗಿ ಚಿಕಿತ್ಸೆಪಡೆದರು. ಅದಾದ ನಂತರ ಶಿರಸಿ ಗಾಂಧಿನಗರದ ರಾಘವೇಂದ್ರ (ರಾಘು) ಸಿದ್ರಣ್ಣ ಕಲ್ಕುಟ್ರ ವಿರುದ್ಧ ಅವರು ದೂರು ನೀಡಿ, ಪ್ರಕರಣವನ್ನು ದಾಖಲಿಸಿದರು.