ಕಾರು ಖರೀದಿಗೆಗಾಗಿ ಶ್ರೀರಾಮ ಫೈನಾನ್ಸಿನಲ್ಲಿ ಸಾಲ ಮಾಡಿದ್ದ ಭಟ್ಕಳದ ಮಣಿಕಂಟ ವೆಂಕಟಾಪುರ ಅವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಾರಿನಲ್ಲಿ ಬರುತ್ತಿದ್ದ ಅವರನ್ನು ಅಡ್ಡ ಹಾಕಿದ ಮೂವರು ಕಾಲರ್ ಪಟ್ಟಿ ಹಿಡಿದು ಚಾಕು ತೋರಿಸಿ ದರೋಡೆ ಮಾಡಿದ್ದಾರೆ.
ಭಟ್ಕಳದ ನೆರ್ಲೆಸರದ ಮಣಿಕಂಠ ವೆಂಕಟಾಪುರ ಅವರು ಭಟ್ಕಳದ ಶ್ರೀರಾಮ ಫೈನಾನ್ಸಿನಲ್ಲಿ 8.10 ಲಕ್ಷ ರೂ ಸಾಲ ಮಾಡಿದ್ದರು. ಆ ಕಾರಿನ ಮೇಲೆ ಅವರು ಬೆಂಗಳೂರಿಗೆ ಹೋಗಿದ್ದರು. ಅಲ್ಲಿಂದ ಮರಳುವಾಗ ರಂಗಿನಕಟ್ಟಾದ ಜೀವನ ನಾಯ್ಕ ಅವರ ಸೂಚನೆ ಮೇರೆಗೆ ಬೆಂಗಳೂರಿನ ರಾಜ್ ರಿಕವರಿ ಎಜನ್ಸಿಯ ಸೀನು, ಪ್ರದೀಪ ಎಂಬಾತರು ಮಣಿಕಂಠ ವೆಕಟಾಪುರ ಅವರನ್ನು ಬೆಂಗಳೂರಿನ ಬಳಿ ಅಡ್ಡಗಟ್ಟಿದರು. ಹೆಬ್ಬಾಳದ ಬಿ ಎಲ್ ಸರ್ಕಲ್ ಬಳಿ ಚಾಕು ತೋರಿಸಿ, ಹಣ ಕೊಡುವಂತೆ ದಬಾಯಿಸಿದರು.
`ಕೂಡಲೇ 60 ಸಾವಿರ ರೂ ಪಾವತಿಸಬೇಕು. ಇಲ್ಲವಾದಲ್ಲಿ ಹುಡುಗರನ್ನು ಕರೆಯಿಸಿ ಹೊಡೆಸುತ್ತೇವೆ’ ಎಂದು ಅಡ್ಡಗಟ್ಟಿದವರು ಬೆದರಿಸಿದರು. ಈ ವೇಳೆ ಮಣಿಕಂಠ ಅವರ ಬಳಿ 30 ಸಾವಿರ ರೂಪಾಯಿ ಇದ್ದು, ಅದನ್ನು ಅವರಿಗೆ ನೀಡಿದರು. ಅದಾದ ನಂತರ ಸಮೀಪದ ಎಟಿಎಂ ಕೇಂದ್ರಕ್ಕೆ ಕರೆದೊಯ್ದು ಅಲ್ಲಿಂದ 20 ಸಾವಿರ ರೂ ತೆಗೆಸಿದರು. ಉಳಿದ 10 ಸಾವಿರ ರೂ ಹಣವನ್ನು ಲೋಕೇಶ ಕುಮಾರ ಎಂಬಾತರ ಬ್ಯಾಂಕ್ ಖಾತೆಗೆ ಆನ್ ಲೈನ್ ಮೂಲಕ ವರ್ಗಾಯಿಸಿದರು.
ಆ ಡಕಾಯಿತರಿಂದ ತಪ್ಪಿಸಿಕೊಂಡು ಬಂದ ಮಣಿಕಂಠ ಅವರು ಭಟ್ಕಳ ಗ್ರಾಮೀಣ ಠಾಣೆಯಲ್ಲಿ ದೂರು ನೀಡಿದರು. ಪೊಲೀಸರು ಜಿರೋ ಎಫ್‌ಐಆರ್ ದಾಖಲಿಸಿಕೊಂಡಿದ್ದು, ಘಟನೆ ನಡೆದ ಪೊಲೀಸ್ ಠಾಣೆಗೆ ಪ್ರಕರಣ ವರ್ಗಾಯಿಸುವ ತಯಾರಿ ಮಾಡಿದ್ದಾರೆ.