ಅರಣ್ಯವಾಸಿಗಳಿಗೆ ಪರಿಸರ ಜ್ಞಾನ ಮೂಡಿಸುವಿಕೆಗೆ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ದಶಲಕ್ಷ ಗಿಡ ನೆಡುವ ಅಭಿಯಾನ ನಡೆಸಿದ್ದು, ನೂರಾರು ಮಕ್ಕಳು ಉತ್ಸಾಹದಿಂದ ಈ ಕಾರ್ಯದಲ್ಲಿ ಭಾಗಿಯಾಗಿದ್ದಾರೆ. ಜಿಲ್ಲೆಯ ಎಲ್ಲಡೆ ಮಕ್ಕಳೇ ಮುಂದೆ ನಿಂತು ಬಗೆ ಬಗೆಯ ಗಿಡಗಳನ್ನು ನಾಟಿ ಮಾಡುತ್ತಿದ್ದಾರೆ.
`ಉತ್ತರ ಕನ್ನಡ ಜಿಲ್ಲೆಯ 650ಕ್ಕೂ ಅಧಿಕ ಗ್ರಾಮದಲ್ಲಿ ಗಿಡ ನೆಡುವ ಕಾರ್ಯ ನಡೆಯುತ್ತಿದೆ. ಮಕ್ಕಳಲ್ಲಿ ಪರಿಸರ ಕಾಳಜಿ ಮೂಡಿರುವುದು ಶ್ಲಾಘನೀಯ’ ಎಂದು ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಅವರು ಹೇಳಿದ್ದಾರೆ. `ಶಿರಸಿ, ಸಿದ್ದಾಪುರ, ಯಲ್ಲಾಪುರ, ಮುಂಡಗೋಡ, ಜೋಯಿಡಾ, ಭಟ್ಕಳ, ಹೊನ್ನಾವರ, ಕುಮಟಾ, ಅಂಕೋಲ ಮತ್ತು ಕಾರವಾರ ತಾಲೂಕಿನಲ್ಲಿ ಉತ್ತಮ ಸ್ಪಂದನೆ ಸಿಕ್ಕಿದೆ. ಹೋರಾಟಗಾರರ ಮಕ್ಕಳು ಸಹ ಉತ್ಸಾಹದಿಂದ ಗಿಡ ನೆಡುವ ಕಾರ್ಯದಲ್ಲಿ ಭಾಗಿಯಾಗಿದ್ದಾರೆ’ ಎಂದವರು ಮಾಹಿತಿ ನೀಡಿದ್ದಾರೆ.
`ಜೀವನಕ್ಕಾಗಿ ಅರಣ್ಯ ಭೂಮಿಯಲ್ಲಿ ಜೀವಿಸಿದ ಅರಣ್ಯವಾಸಿಗಳು ಅರಣ್ಯ ಸಾಂದ್ರತೆ ಹೆಚ್ಚಿಸುವ ಮನೋಭಾವನೆ ವೃದ್ಧಿಸುವ ಉದ್ದೇಶದಿಂದ ಗಿಡ ನೆಡುವ ಕಾರ್ಯಕ್ಕೆ ಹೋರಾಟಗಾರರ ವೇದಿಕೆ ಚಾಲನೆ ನೀಡಿದೆ. 10 ವರ್ಷದಿಂದ ಗಿಡ ನೆಡುವ ಅಭಿಯಾನ ನಡೆಯುತ್ತಿದೆ’ ಎಂದವರು ವಿವರಿಸಿದ್ದಾರೆ. `ಮಹಿಳೆಯರು, ಮಕ್ಕಳು ಸೇರಿ ನೂರಕ್ಕೂ ಅಧಿಕ ಬಗೆಯ ಗಿಡ ನೆಡುತ್ತಿದ್ದಾರೆ. ಪರಿಸರಕ್ಕೆ ಈ ಗಿಡಗಳು ಪೂರಕವಾಗಿದೆ’ ಎಂದಿದ್ದಾರೆ.