ಕುಮಟಾದಲ್ಲಿ ಸುರಿದ ಧಾರಾಕಾರ ಮಳೆಗೆ ಕತಗಾಲಿನ ತೋಟಕ್ಕೆ ನೀರು ನುಗ್ಗಿದ್ದು, ಶಿರಗುಂಜಿಯ ಗೋಪಾಲಕೃಷ್ಣ ಭಟ್ಟರ ಮನೆ ಹಿಂದಿನ ಬಾವಿ ಮುಳುಗಿದೆ. ಆ ಬಾವಿಯೊಳಗೆ ಬಿದ್ದು ಗೋಪಾಲಕೃಷ್ಣ ಭಟ್ಟರು ಸಾವನಪ್ಪಿದ್ದಾರೆ.
ಕುಮಟಾ ಕತಗಾಲದ ಶಿರಗುಂಜಿಯಲ್ಲಿ ಗೋಪಾಲಕೃಷ್ಣ ವಿಷ್ಣು ಭಟ್ಟ ಅವರು ವಾಸವಾಗಿದ್ದರು. ಪುರೋಹಿತ ಕೆಲಸ ಮಾಡಿ ಅವರು ಬದುಕು ಕಟ್ಟಿಕೊಂಡಿದ್ದರು. ಜೊತೆಗೆ ಗೋಪಾಲಕೃಷ್ಣ ಭಟ್ಟರು ಕೃಷಿಯನ್ನು ಮಾಡಿಕೊಂಡಿದ್ದು, ತೋಟದಲ್ಲಿ ಬಾವಿ ತೋಡಿಸಿದ್ದರು. ಆ ಬಾವಿ ಸುತ್ತ ರಕ್ಷಣಾ ಬೇಲಿ ಇರಲಿಲ್ಲ. ತಡೆಗೋಡೆ ಸಹ ಹಾಕಿರಲಿಲ್ಲ. ಹೀಗಿರುವಾಗ, ಜುಲೈ 9ರಂದು ಕುಮಟಾದಲ್ಲಿ ಸುರಿದ ಭಾರೀ ಪ್ರಮಾಣದ ಮಳೆ ಅವರ ಬದುಕಿಗೆ ಮಾರಕವಾಯಿತು.
ಆ ದಿನ ಗೋಪಾಲಕೃಷ್ಣ ಭಟ್ಟರು ತೋಟದ ಕೆಲಸಕ್ಕೆ ಹೋಗಿದ್ದರು. ಮಳೆಯಲ್ಲಿ ಸಿಲುಕಿದ ಅವರು ಮನೆ ಕಡೆ ಹೊರಡಲು ನಿರ್ಧರಿಸಿದರು. ಜೋರಾದ ಮಳೆಗೆ ತೋಟದ ಬಾವಿ ತುಂಬಿಕೊAಡಿದ್ದು, ಬಾವಿಗೆ ಸಮನಾಂತರವಾಗಿ ನೀರು ಹರಿಯುತ್ತಿತ್ತು. ಗೋಪಾಲಕೃಷ್ಣ ಭಟ್ಟರು ಅದೇ ನೀರಿನಲ್ಲಿ ಹೆಜ್ಜೆ ಹಾಕುತ್ತ ಬಂದವರು ಬಾವಿಯ ಬಗ್ಗೆ ಅರಿವಿಲ್ಲದೇ ಅಲ್ಲಿ ಕಾಲಿಟ್ಟರು. ಆಳವಾದ ಬಾವಿಗೆ ಬಿದ್ದ ಅವರಿಂದ ಮೇಲೆ ಬರಲು ಸಾಧ್ಯವಾಗಲಿಲ್ಲ. ನೀರನ್ನೇ ಉಸಿರಾಡಿದ ಪರಿಣಾಮ ಅವರು ಅಲ್ಲಿಯೇ ಕೊನೆಯುಸಿರೆಳೆದರು.
ಮಧ್ಯಾಹ್ನವಾದರೂ ಗೋಪಾಲಕೃಷ್ಣ ಭಟ್ಟರು ಮನೆಗೆ ಬಾರದ ಕಾರಣ ಅವರ ಪತ್ನಿ ಜಯಲಕ್ಷಿ ಭಟ್ಟ ಅವರು ತೋಟದ ಕಡೆ ಹೊರಟರು. ಆ ಹೊತ್ತಿಗೆ ಮಳೆ ಸ್ವಲ್ಪ ಕಡಿಮೆಯಾಗಿದ್ದು, ಬಾವಿಯ ಬಳಿ ಪತಿಯ ಶವ ಕಂಡರು. ಪತಿ ಸಾವಿನ ಬಗ್ಗೆ ಅವರೇ ಪೊಲೀಸರಿಗೆ ಫೋನ್ ಮಾಡಿ ಮಾಹಿತಿ ನೀಡಿ, ಪ್ರಕರಣ ದಾಖಲಿಸಿದರು.
`ನೀರಿರುವ ಸ್ಥಳದ ಕಡೆ ಹೋಗುವಾಗ ಜೋಪಾನ’