`ಯಲ್ಲಾಪುರದಲ್ಲಿ ಹಾದು ಹೋದ ರಾಷ್ಟಿಯ ಹೆದ್ದಾರಿ ಪಕ್ಕದಲ್ಲಿ ಪೈಪ್‌ಲೈನ್ ಅಳವಡಿಕೆಗೆ ಕಾನೂನುಬಾಹಿರವಾಗಿ ಹೊಂಡ ತೋಡಿದ್ದು, ಅದನ್ನು ಸರಿಯಾಗಿ ಮುಚ್ಚದ ವಾಹನಗಳ ಓಡಾಟಕ್ಕೆ ಸಮಸ್ಯೆಯಾಗಿದೆ. ಸಾರ್ವಜನಿಕರಿಗೆ ಸಮಸ್ಯೆ ಮಾಡಿದ ಗುತ್ತಿಗೆದಾರನ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕಿದೆ’ ಎಂದು ಉತ್ತರ ಕನ್ನಡ ಲಾರಿ ಮಾಲಕರ ಸಂಘದವರು ಪೊಲೀಸರಲ್ಲಿ ಆಗ್ರಹಿಸಿದ್ದಾರೆ.
`ಯಲ್ಲಾಪುರದ ಕೋಳಿಕೇರೆಯಿಂದ ಕಿರವತ್ತಿಯವರೆಗೆ ರಸ್ತೆ ಪಕ್ಕ ಪೈಪ್‌ಲೈನ್ ಅಳವಡಿಕೆಗೆ ಹೊಂಡ ತೆಗೆಯಲಾಗಿದೆ. ಕಾಮಗಾರಿ ಮುಗಿದ ನಂತರ ಆ ಹೊಂಡ ಮುಚ್ಚುವ ಕೆಲಸ ನಡೆದಿಲ್ಲ. ಮೇಲ್ಮೆöÊ ಮಾತ್ರ ಮಣ್ಣು ಹಾಕಿದ್ದರಿಂದ ಅಲ್ಲಿ ಅನೇಕ ವಾಹನಗಳು ಸಿಲುಕುತ್ತಿವೆ. ಜನರ ಸುರಕ್ಷತೆಗೆ ಸಮಸ್ಯೆಯಾಗಿದ್ದು, ಕೂಡಲೇ ಕ್ರಮ ಜರುಗಿಸಬೇಕು’ ಎಂದು ಸಂಘದವರು ಒತ್ತಾಯಿಸಿದ್ದಾರೆ.
`ಈ ಮಾರ್ಗದಲ್ಲಿ ಸೂಕ್ತ ಎಚ್ಚರಿಕಾ ಫಲಕ ಅಳವಡಿಸಬೇಕು. ಅಗತ್ಯವಿರುವ ಕಡೆ ಬ್ಯಾರಿಕೆಟ್ ಹಾಕಬೇಕು. ಚಾಲಕರ ಜೀವಕ್ಕೆ ಸಮಸ್ಯೆ ಆಗುವ ರೀತಿ ವರ್ತಿಸಿದವರ ವಿರುದ್ಧ ಕಾನೂನು ಕ್ರಮವಾಗಬೇಕು’ ಎಂದು ಆಗ್ರಹಿಸಿದರು. `ಇಲ್ಲಿ ಯಾವುದೇ ಅಪಘಾತ ನಡೆದರೆ ಅಪಾಯ ಸೃಷ್ಠಿಸಿದ ಗುತ್ತಿಗೆದಾರರನ್ನು ಹೊಣೆಗಾರರನ್ನಾಗಿ ಮಾಡಬೇಕು. ಗಾಯಗೊಂಡವರ ಚಿಕಿತ್ಸೆ ವೆಚ್ಚದ ಜೊತೆ ರಕ್ಷಣಾ ಕಾರ್ಯಾಚರಣೆಯ ಸಂಪೂರ್ಣ ವೆಚ್ಚವನ್ನು ಗುತ್ತಿಗೆದಾರರಿಂದಲೇ ಭರಿಸಬೇಕು’ ಎಂದು ಒತ್ತಾಯಿಸಿದರು.
`ಕಾನೂನು ಹಾಗೂ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸರು ಈ ಸಮಸ್ಯೆ ಗಮನಿಸಿ ಕ್ರಮ ಜರುಗಿಸಬೇಕು. ಕೂಡಲೇ ಸ್ಥಳ ಪರಿಶೀಲನೆ ನಡೆಸಿ, ಸರಿಯಾದ ರೀತಿ ಕಾಲುವೆ ಮುಚ್ಚಿಸಬೇಕು’ ಎಂದು ಮನವಿ ಸಲ್ಲಿಸಿದರು. ಪಿಸೈ ರಾಜಶೇಖರ ವಂದಲಿ ಅವರು ಮನವಿ ಸ್ವೀಕರಿಸಿ, ಕ್ರಮ ಜರುಗಿಸುವ ಭರವಸೆ ನೀಡಿದರು. ಯಲ್ಲಾಪುರ ಲಾರಿ ಮಾಲಕರ ಸಂಘದ ಅಧ್ಯಕ್ಷ ಸುಜಯ್ ಮರಾಠಿ, ಸಂಘಟನೆ ಗೌರವಾಧ್ಯಕ್ಷ ಮಹೇಶ್ ನಾಯ್ಕ, ಸಂಘಟನೆ ಜಿಲ್ಲಾ ಉಪಾಧ್ಯಕ್ಷ ಖಾಜಾ, ಪ್ರಮುಖರಾದ ಅತ್ತಾರ, ರಾಜೇಶ್ ನಾಯ್ಕ, ಮುರಳಿ ರಾವಲ್ ಇದ್ದರು.