ಭಟ್ಕಳದ ಸಂದೀಪ ಶಿರಾಲಿ ಎಂಬಾತರು ಅಪ್ರಾಪ್ತನಿಗೆ ಬೈಕ್ ನೀಡಿ ಅದರ ಸೆಲ್ಪಿ ವಿಡಿಯೋ ಹರಿಬಿಟ್ಟಿದ್ದು, ಆ ವಿಡಿಯೋವೇ ಅವರಿಗೆ ಮುಳುವಾಗಿದೆ. ಅಪ್ರಾಪ್ತನಿಗೆ ಬೈಕ್ ನೀಡಿದ ಕಾರಣ ಸಂದೀಪ ಶಿರಾಲಿ ಅವರ ವಿರುದ್ಧ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ.
ಭಟ್ಕಳ ಪೊಲೀಸ್ ಠಾಣೆಯಲ್ಲಿ ದುರ್ಗೇಶ ನಾಯ್ಕ ಎಂಬಾತರು ಕಾರ್ಯನಿರ್ವಹಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳ ಮೇಲೆ ದುರ್ಗೇಶ ನಾಯ್ಕ ಅವರು ಕಣ್ಣಿಟ್ಟಿದ್ದಾರೆ. ಜಾಲತಾಣಗಳಲ್ಲಿ ಬರುವ ಎಲ್ಲಾ ವಿಷಯಗಳನ್ನು ಗಮನಿಸುವ ಅವರು ಕಾನೂನುಬಾಹಿರ ಕೆಲಸದ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ. ಅದರಂತೆ, ಜುಲೈ 12ರಂದು ಅವರು ಫೇಸ್ಬುಕ್ ನೋಡುವಾಗ ಅಪ್ರಾಪ್ತನೊಬ್ಬ ಬೈಕ್ ಓಡಿಸಿದ ವಿಡಿಯೋ ಕಾಣಿಸಿದೆ.
ಆ ವಿಡಿಯೋ ಭಟ್ಕಳ ರಾಷ್ಟಿಯ ಹೆದ್ದಾರಿಯಲ್ಲಿ ಸಂಚರಿಸಿದ ಬೈಕಿನದ್ದಾಗಿದ್ದು, ವಿಡಿಯೋ ಅಪ್ಲೋಡ್ ಮಾಡಿದ ಪ್ರೊಪೈಲನ್ನು ಅವರು ಗಮನಿಸಿದ್ದಾರೆ. ಸಂದೀಪ ಶಿರಾಲಿ ಎಂಬ ಖಾತೆದಾರರು ಆ ವಿಡಿಯೋ ಹರಿಬಿಟ್ಟಿದನ್ನು ದುರ್ಗೇಶ ನಾಯ್ಕ ಅವರು ದೃಢಪಡಿಸಿಕೊಂಡಿದ್ದಾರೆ. ಅಪ್ರಾಪ್ತ ಬೈಕ್ ಚಲಾಯಿಸಿದ ಸೆಲ್ಪಿ ವಿಡಿಯೋದಲ್ಲಿ ಅನೇಕ ಬಗೆಯ ಹುಚ್ಚಾಟಗಳಿದ್ದು, ಶಿರಾಲಿ ರಾಷ್ಟಿಯ ಹೆದ್ದಾರಿಯಲ್ಲಿ ಅಪಾಯಕಾರಿ ವಿಡಿಯೋ ಮಾಡಿದಲ್ಲದೇ, ಅದನ್ನು ಹರಿಬಿಟ್ಟು ಬೇರೆಯವರಿಗೂ ಪ್ರಚೋದನೆ ನೀಡಿದ ಕಾರಣ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.