ಕೆನರಾ ಸಾರಸ್ವತ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಸದಸ್ಯರ ಸಹಿ ಫೋರ್ಜರಿಯಾಗಿದೆ. ಅಲ್ಲಿನ ವಿವೇಕ ಪೈ ಅವರು ತಮ್ಮ ದುಷ್ಟಕೂಟದ ಸಹಚರರಾದ ನಾಗೇಂದ್ರ ಪೈ ಹಾಗೂ ಮಂಜುನಾಥ ನಾಯ್ಕ ಅವರ ಜೊತೆ ಸೇರಿ ಸೊಸೈಟಿ ಸದಸ್ಯರ ಸಹಿ ನಕಲು ಮಾಡಿ ಕೋರ್ಟಿಗೆ ಹೋಗಿದ್ದಾರೆ!
ಕುಮಟಾ ರಥಬೀದಿಯಲ್ಲಿ ಕೆನರಾ ಸಾರಸ್ವತ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಕಚೇರಿಯಿದೆ. ಇಲ್ಲಿ ರಕ್ಷಾ ರಾಮದಾಸ ಪ್ರಭು ಅವರು ಪ್ರಧಾನ ವ್ಯವಸ್ಥಾಪಕಿಯಾಗಿದ್ದಾರೆ. 2026ರ ಜನವರಿ 12ರಂದು ಈ ಸೊಸೈಟಿಗೆ ಚುನಾವಣೆ ಘೋಷಣೆಯಾಗಿದ್ದು, ಫೆಬ್ರವರಿ 1ರಂದು ಚುನಾವಣೆ ನಡೆದಿದೆ. ಏಪ್ರಿಲ್ 19ರಂದು ಫಲಿತಾಂಶವೂ ಪ್ರಕಟವಾಗಿದೆ. ಆದರೆ, `ಚುನಾವಣೆಯ ಮತದಾರರ ಪಟ್ಟಿ ಪಾರದರ್ಶಕವಾಗಿಲ್ಲ’ ಎಂದು ಸುಭಾಶ್ ರಸ್ತೆಯ ವಿವೇಕ ಮುರ್ತು ಪೈ ಅವರು ಆಕ್ಷೇಪಿಸಿದ್ದಾರೆ. `ತಮ್ಮ ಮತದಾನದ ಹಕ್ಕು ತಡೆಯಲಾಗಿದೆ’ ಎಂದು ಅವರು ಧಾರವಾಡ ಹೈಕೋರ್ಟಿನ ಮೊರೆ ಹೋಗಿದ್ದಾರೆ. ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟು ಮಾರ್ಚ 11ರಂದು ಅವರ ಅರ್ಜಿ ತಿರಸ್ಕರಿಸಿದೆ. ಅದಾಗಿಯೂ, ವಿವೇಕ ಪೈ ಅವರು ದ್ವಿಸದಸ್ಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದು, ಆ ಪೀಠವೂ ಹೈಕೋರ್ಟಿನ ಮೊದಲ ಆದೇಶವನ್ನೇ ಎತ್ತಿಹಿಡಿದಿದೆ. ಈ ವೇಳೆ ಕೋರ್ಟು ವಿವೇಕ್ ಪೈ ಅವರಿಗೆ ಇನ್ನೊಂದು ಅವಕಾಶ ಕಲ್ಪಿಸಿದ್ದು, ಉಪನಿಬಂಧಕರ ಕಚೇರಿಯಲ್ಲಿ ಈ ಪ್ರಕರಣ ಮುಂದುವರೆಸಲು ಅವಕಾಶ ಮಾಡಿಕೊಟ್ಟಿದೆ.
ಆ ಅವಕಾಶವನ್ನು ದುರುಪಯೋಗಪಡಿಸಿಕೊಂಡ ವಿವೇಕ ಪೈ ಅವರು ಮೇ 24ರಂದು ಬೆಳಗಾವಿಯ ಸಹಕಾರಿ ಸಂಘಗಳ ಉಪನಿಬಂಧಕರ ಕಚೇರಿಗೆ ಅರ್ಜಿ ಸಲ್ಲಿಸಿದ್ದಾರೆ. ವಕೀಲರ ಮೂಲಕ ಸಲ್ಲಿಸಿದ ಅರ್ಜಿಯ ವಕಾಲತ್ ನಮೂನೆಯಲ್ಲಿ ಕೆನರಾ ಸಾರಸ್ವತ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ 198 ಸದಸ್ಯರ ಸಹಿಯನ್ನು ಫೋರ್ಜರಿ ಮಾಡಿದ್ದಾರೆ. ಈ ಫೋರ್ಜರಿ ಕೆಲಸಕ್ಕೆ ಕುಮಟಾ ಚಿತ್ರಗಿಯ ನಾಗೇಂದ್ರ ನಾರಾಯಣ ಪೈ ಹಾಗೂ ಹೆಗಡೆಯ ಮಂಜುನಾಥ ಶ್ರೀಧರ ನಾಯ್ಕ ಅವರು ಜೊತೆಯಾಗಿದ್ದಾರೆ. ಈ ಅರ್ಜಿಯಲ್ಲಿ ಚುನಾವಣಾಧಿಕಾರಿ ಹಾಗೂ 16 ಪ್ರತಿವಾದಿಗಳ ವಿರುದ್ಧ ಅವರು ದೂರು ನೀಡಿದ್ದು, ಈ ವಿಷಯ ಅರಿತ ಸೊಸೈಟಿ ವ್ಯವಸ್ಥಾಪಕಿ ರಕ್ಷಾ ಪ್ರಭು ಅವರು ಅದನ್ನು ಪ್ರಾಧಿಕಾರದ ಗಮನಕ್ಕೆ ತಂದಿದ್ದಾರೆ.
ಫೋರ್ಜರಿ ಸಹಿ ವಿಷಯ ಪ್ರಾಧಿಕಾರದ ಗಮನಕ್ಕೆ ಬಂದಿರುವುದನ್ನು ಅರಿತು ವಿವೇಕ ಪೈ ಅವರು ಜೂನ್ 10ರಂದು ತಾವು ದಾಖಲಿಸಿದ ದಾವೆ ಹಿಂಪಡೆದಿದ್ದಾರೆ. ಆದರೆ, ಸೊಸೈಟಿ ವಿರುದ್ಧ ಸೇಡು ತೀರಿಸಿಕೊಳ್ಳಲು ಬಂದ ವಿವೇಕ ಪೈ, ನಾಗೇಂದ್ರ ಪೈ ಹಾಗೂ ಮಂಜುನಾಥ ನಾಯ್ಕ ಅವರ ಕುರಿತು ರಕ್ಷಾ ಪ್ರಭು ಅವರು ಮೃದು ಧೋರಣೆ ಅನುಸರಿಸಿಲ್ಲ. ಆ ಮೂವರು ಮಾಡಿದ ಕುತಂತ್ರದ ಬಗ್ಗೆ ಅವರು ಕುಮಟಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಆ ದೂರು ಸದ್ಯ ಬೆಳಗಾವಿಯ ಮಾಳಮಾರುತಿ ಪೊಲೀಸ್ ಠಾಣೆಗೆ ವರ್ಗವಾಗಿದೆ. ಬೆಳಗಾವಿ ಸಹಕಾರಿ ಉಪನಿಬಂಧಕರ ಕಚೇರಿಗೆ ಸುಳ್ಳು ಸಹಿ ಮಾಡಿದ ದಾಖಲೆ ನೀಡಿದ ಕಾರಣ ಆ ಮೂವರು ಸಮಸ್ಯೆಗೆ ಸಿಲುಕಿದ್ದಾರೆ.