ಶಕ್ತಿ ಯೋಜನೆಯ ಫಲಾನುಭವಿಯೊಬ್ಬರು ಕೊಲ್ಲಾಪುರದಿಂದ ಗೋಕರ್ಣಕ್ಕೆ ಬರುವ ಬಸ್ಸಿಗೆ ಕಲ್ಲು ಹೊಡೆದಿದ್ದಾರೆ. ತಾವು ಸೂಚಿಸಿದ ಸ್ಥಳದಲ್ಲಿ ಬಸ್ ನಿಲ್ಲಿಸದ ಕಾರಣ ಕಂಡೇಕ್ಟರ್ ಮೇಲೆಯೂ ಅವರು ತಮ್ಮ ಶಕ್ತಿ ಪ್ರಯೋಗ ಮಾಡಿದ್ದಾರೆ.
ಮಂಗಳವಾರ ಖಾನಾಪುರದ ಹೊರಟ ಬಸ್ಸಿಗೆ ಮಹಿಳೆಯೊಬ್ಬರು ಹತ್ತಿದ್ದು, ಗುಂಜಿ ಎಂಬ ಊರಿಗೆ ಟಿಕೆಟ್ ಕೇಳಿದ್ದರು. `ಆ ಊರಿನಲ್ಲಿ ಬಸ್ ನಿಲ್ಲಿಸಲ್ಲ’ ಎಂದರೂ ಸಹ ಮಹಿಳೆ ಬಸ್ಸಿನಿಂದ ಕೆಳಗಿಳಿದಿರಲಿಲ್ಲ. ಶಕ್ತಿ ಯೋಜನೆಯ ಪ್ರಯಾಣಿಕರಾದ ಅವರಿಗೆ ಕಂಡೆಕ್ಟರ್ ಲೋಂಡಾ ಊರಿನ ಟಿಕೆಟ್ ನೀಡಿದ್ದರು. ಆಧಾರ್ ಕಾರ್ಡ ಗಮನಿಸಿ ಕಂಡೆಕ್ಟರ್ ಟಿಕೆಟ್ ಹರಿದಿದ್ದರು. ಗುಂಜಿ ಬಳಿ ಬಸ್ಸು ಬಂದಾಗ ನಿಲ್ಲಿಸುವಂತೆ ಆ ಮಹಿಳೆ ತಾಕೀತು ಮಾಡಿದರು. ಆದರೆ, ಪ್ರಯಾಣಿಕರನ್ನು ಇಲ್ಲಿ ಇಳಿಸಿದರೆ ತಮಗೆ ಸಮಸ್ಯೆಯಾಗುತ್ತದೆ ಎಂದು ಅರಿತಿದ್ದ ಕಂಡೆಕ್ಟರ್ ಸೀಟಿ ಊದಲಿಲ್ಲ.
ಆ ಬಸ್ಸು ಲೋಂಡಾ ತಲುಪಿದ್ದು, ಗುಂಜಿಯಲ್ಲಿ ಇಳಿಯಲು ಸಾಧ್ಯವಾಗದ ಮಹಿಳೆ ಲೋಂಡಾದಲ್ಲಿ ಬಸ್ಸಿನಿಂದ ಇಳಿದು ಕಲ್ಲು ತೂರಿದರು. ಕಂಡೆಕ್ಟರ್’ಗೂ ಕೆಟ್ಟದಾಗಿ ಬೈದು ಅವರ ಕಾಲರ್ ಹಿಡಿದು ಥಳಿಸಿದರು. ಬಸ್ಸಿನ ಗಾಜು ಒಡೆದಿದ್ದು, ಕಂಡೆಕ್ಟರ್ ಸಹ ತಮ್ಮ ಕೊರಳಿನಲ್ಲಿದ್ದ ಎರಡು ತೊಲೆಯ ಚಿನ್ನದ ಸರ ಕಾಣೆಯಾಗಿದೆ ಎಂದು ದೂರಿದ್ದಾರೆ.