ಗಡಿಪಾರು ಆದೇಶವನ್ನು ಮೀರಿ ಉತ್ತರ ಕನ್ನಡ ಜಿಲ್ಲೆ ಪ್ರವೇಶಿಸಿದ್ದ ಸುನೀಲ ಭೋವಿವಡ್ಡರ್ (ಸ್ವಾಮೇಲ್) ಅವರನ್ನು ಪೊಲೀಸರು ಬಂಧಿಸಿದ್ದು, ಅವರು ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗುವ ಪ್ರಯತ್ನ ಮಾಡಿದ್ದಾರೆ. ಪೊಲೀಸರನ್ನು ದೂಡಿ ಓಡಿ ಹೋಗಿದ್ದ ಸುನೀಲ ಭೋವಿವಡ್ಡರ್ ಅವರು ಪೊದೊಯೊಳಗೆ ಕುಳಿತು ಬೆವರುತ್ತಿದ್ದು, ಶಿರಸಿ ಪೊಲೀಸರು ಚಾಣಾಕ್ಷತನದಿಂದ ಅವರನ್ನು ಮತ್ತೆ ಹಿಡಿದಿದ್ದಾರೆ.
ಶಿರಸಿಯ ಬನವಾಸಿ ಬಳಿಯ ಬದನಗೋಡದ ಸುನೀಲ ಭೋವಿವಡ್ಡರ್ ಅವರು ಕಳ್ಳತನ, ಜೀವ ಬೆದರಿಕೆ ಸೇರಿ ಏಳು ಅಪರಾಧ ಪ್ರಕರಣದಲ್ಲಿ ಭಾಗಿಯಾಗಿದ್ದರು. ಸಾಕ್ಷಿದಾರರನ್ನು ಸಹ ಅವರು ಹೆದರಿಸುತ್ತಿದ್ದರು. ರೌಡಿಯ ಅಟ್ಟಹಾಸ ತಡೆಗಾಗಿ ಅವರನ್ನು ಉತ್ತರ ಕನ್ನಡ ಜಿಲ್ಲೆಯಿಂದ ಗಡಿಪಾರು ಮಾಡಲಾಗಿತ್ತು. ಪೊಲೀಸರು ಅವರನ್ನು ಯಾದಗಿರಿಗೆ ಬಿಟ್ಟು ಬಂದಿದ್ದರು. ಅಲ್ಲಿನ ಪೊಲೀಸ್ ಠಾಣೆಯಲ್ಲಿ ಸಹಿ ಹಾಕಿದ ಆರೋಪಿ, ಮರುದಿನವೇ ಅವರು ಊರಿಗೆ ಮರಳಿದ್ದು, ಗಡಿಪಾರು ಆದೇಶ ಉಲ್ಲಂಗಿಸಿದ ಕಾರಣ ಪೊಲೀಸರು ಮತ್ತೊಂದು ಪ್ರಕರಣ ದಾಖಲಿಸಿದ್ದರು.
ಈ ನಡುವೆ ಪೊಲೀಸರು ಸುನೀಲ ಚಂದ್ರಪ್ಪ ಭೋವಿವಡ್ಡರ್ ಅವರನ್ನು ಬಂಧಿಸಿದರು. ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಅಬ್ದುಲ್ ಸಯ್ಯದ್ ಹುಸೇನ್ ಅವರ ಬೆಂಗಾವಲಿನಲ್ಲಿ ಸುನೀಲ ಭೋವಿವಡ್ಡರ್ ಅವರು ನ್ಯಾಯಾಲಯಕ್ಕೆ ಹಾಜರಾದರು. ನ್ಯಾಯಾಲಯ ಜುಲೈ 14ರಿಂದ ಜುಲೈ 27ರವರೆಗೆ ಸುನೀಲ ಭೋವಿವಡ್ಡರ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು. ನ್ಯಾಯಾಂಗ ಬಂಧನಕ್ಕೂ ಮುನ್ನ ಆರೋಪಿಯ ದೈಹಿಕ ಪರೀಕ್ಷೆ ನಡೆಸಲು ನಿರ್ಧರಿಸಿದ್ದು, ಪೊಲೀಸರು ಅವರನ್ನು ಪಿಜಿ ಆಸ್ಪತ್ರೆಗೆ ಕರೆತಂದರು. ಜೈಲಿಗೆ ಹೋಗಲು ಇಷ್ಟವಿಲ್ಲದ ಸುನೀಲ್ ಭೋವಿವಡ್ಡರ್ ಅವರು ಪೊಲೀಸ್ ಸಿಬ್ಬಂದಿ ಅಬ್ದುಲ್ ಸಯ್ಯದ್ ಹುಸೇನ್ ಅವರನ್ನು ದೂಡಿ ಅಲ್ಲಿಂದ ಓಡಿ ಹೋದರು. ಅಬ್ದುಲ್ ಸಯ್ಯದ್ ಹುಸೇನ್ ಅವರು ನೆಲಕ್ಕೆ ಬಿದ್ದಿದ್ದು, ಮತ್ತೊಬ್ಬ ಪೊಲೀಸ್ ಸಿಬ್ಬಂದಿ ಆರೋಪಿ ಬೆನ್ನತ್ತಿದರು. ಆದರೆ, ಶಿರಸಿ-ಯಲ್ಲಾಪುರ ರಸ್ತೆಯಲ್ಲಿ ಆ ಪೊಲೀಸ್ ಸಿಬ್ಬಂದಿ ಮೇಲೆಯೂ ಸುನೀಲ ಭೋವಿವಡ್ಡರ್ ಹಲ್ಲೆ ಮಾಡಿ ಪರಾರಿಯಾದರು.
ಗಾಯಗೊಂಡ ಪೊಲೀಸ್ ಸಿಬ್ಬಂದಿ ಈ ವಿಷಯವನ್ನು ಶಿರಸಿ ಹೊಸಮಾರುಕಟ್ಟೆ ಪೊಲೀಸರಿಗೆ ತಿಳಿಸಿದರು. ಎಲ್ಲಾ ಪೊಲೀಸರು ಸೇರಿ ಸುನೀಲ ಭೋವಿವಡ್ಡರ್ ಅವರನ್ನು ಹುಡುಕಿದರು. ತೋಟಗಾರ್ಸ ಬಾಯ್ಸ್ ಹಾಸ್ಟೇಲ್ ಎಡಭಾಗದ ಪೊದೆಯೊಳಗೆ ಸುನೀಲ ಭೋವಿವಡ್ಡರ್ ಅಡಗಿ ಕುಳಿತಿದ್ದರು. ಎಲ್ಲಾ ಪೊಲೀಸರು ಸುತ್ತುವರೆದು ಆರೋಪಿಯನ್ನು ಮತ್ತೆ ವಶಕ್ಕೆಪಡೆದು, ಜೈಲಿಗೆ ಕಳುಹಿಸಿದರು.