ಯಲ್ಲಾಪುರದ ಉಮ್ಮಚ್ಗಿ ಬಳಿ ಸ್ಕೂಟಿಯೊಂದು ಸ್ಕಿಡ್ ಆಗಿದ್ದು, ದಾಂಡೇಲಿಯ ಲಕ್ಷ್ಮೀ ಬೋವಿವಡ್ಡರ್ ಅವರು ಸಾವನಪ್ಪಿದ್ದಾರೆ.
ದಾಂಡೇಲಿಯ ಗಾಂಧೀನಗರದಲ್ಲಿ ಸಾವಂತಕುಮಾರ ಬಸಪ್ಪ ಬೋವಿವಡ್ಡರ್ ಅವರು ವಾಸವಾಗಿದ್ದಾರೆ. ಕೂಲಿ ಕೆಲಸ ಮಾಡಿ ಅವರು ಬದುಕು ಕಟ್ಟಿಕೊಂಡಿದ್ದಾರೆ. ಚಿಕ್ಕಮಗಳೂರಿನ ಕೊಪ್ಪದಲ್ಲಿ ಕೆಲಸವಿದ್ದ ಕಾರಣ ಅವರು ಪತ್ನಿ ಸಮೇತ ಅಲ್ಲಿ ಹೋಗಿದ್ದು, ಕೆಲಸ ಮುಗಿಸಿ ಸ್ಕೂಟಿಯಲ್ಲಿ ಅವರು ಮರಳುವಾಗ ಅಪಘಾತಕ್ಕೀಡಾಗಿದ್ದಾರೆ. ಜುಲೈ 7ರ ರಾತ್ರಿ 9.45ಕ್ಕೆ ಶಿರಸಿ-ಯಲ್ಲಾಪುರ ಮಾರ್ಗದ ಉಮ್ಮಚ್ಗಿಯಿಂದ 1ಕಿಮೀ ಹಿಂದೆ ಅವರ ಸ್ಕೂಟಿ ಸ್ಕಿಡ್ ಆಗಿದೆ. ಪರಿಣಾಮ ದಂಪತಿ ನೆಲಕ್ಕೆ ಅಪ್ಪಳಿಸಿದ್ದು, ಸಾವಂತಕುಮಾರ ಅವರ ಪತ್ನಿ ಲಕ್ಷ್ಮೀ ಬೋವಿವಡ್ಡರ್ ಅವರು ಗಂಭೀರ ಪ್ರಮಾಣದಲ್ಲಿ ಗಾಯಗೊಂಡಿದ್ದಾರೆ.
ಈ ಅಪಘಾತ ನೋಡಿದ ಅಪರಿಚಿತರಿಬ್ಬರು ಗಾಯಗೊಂಡವರನ್ನು ಯಲ್ಲಾಪುರ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅದಾದ ನಂತರ ಲಕ್ಷ್ಮೀ ಬೋವಿವಡ್ಡರ್ ಅವರಿಗೆ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದ ಕಾರಣ ಅವರನ್ನು ಹುಬ್ಬಳ್ಳಿಯ ಕಿಮ್ಸ್’ಗೆ ಸಾಗಿಸಲಾಗಿದೆ. ಜುಲೈ 14ರವರೆಗೂ ಆರೈಕೆಯಲ್ಲಿದ್ದ ಅವರು ಸಂಜೆ ವೇಳೆ ಸಾವನಪ್ಪಿದ್ದಾರೆ. ಈ ಅಪಘಾತದ ಬಗ್ಗೆ ಸಾವಂತಕುಮಾರ ಅವರ ಪುತ್ರ ವಿವೇಕ ಬೋವಿವಡ್ಡರ್ ಅವರು ಎದುರುಮನೆಯ ಸುನೀಲ ಶಿಕಾಮಣಿ ಡುಮ್ಮು ಅವರಿಗೆ ಫೋನ್ ಮಾಡಿದ್ದಾರೆ. ಸುನೀಲ ಡುಮ್ಮು ಅವರು ಯಲ್ಲಾಪುರಕ್ಕೆ ಆಗಮಿಸಿ, ಅಪಘಾತ ಹಾಗೂ ಸಾವು ನೋವಿನ ಬಗ್ಗೆ ಪೊಲೀಸರಿಗೆ ವರದಿ ಒಪ್ಪಿಸಿದ್ದಾರೆ.