ರೋಟರಿ ಕ್ಲಬ್ ಪಶ್ಚಿಮ ಕಾರವಾರ ಘಟಕದವರು ಮಕ್ಕಳಲ್ಲಿ ಹಸಿರು ಪ್ರೀತಿ ಹುಟ್ಟಿಸುವ ಅಭಿಯಾನ ನಡೆಸಿದ್ದಾರೆ. ಅಸ್ನೋಟಿ ಶಿವಾಜಿ ವಿದ್ಯಾ ಮಂದಿರದಲ್ಲಿ ಅವರು ವನ ಮಹೋತ್ಸವ ಕಾರ್ಯಕ್ರಮ ನಡೆಸಿ, ಗಿಡಗಳ ಮಹತ್ವದ ಬಗ್ಗೆ ಅರಿವು ಮೂಡಿಸಿದ್ದಾರೆ.
ಶಾಲಾ ಆವರಣದಲ್ಲಿ ಬಗೆ ಬಗೆಯ ಹಣ್ಣಿನ ಗಿಡಗಳನ್ನು ರೋಟರಿ ಕ್ಲಬ್ ಸದಸ್ಯರು ನಾಟಿ ಮಾಡಿದ್ದಾರೆ. ಆ ಗಿಡಗಳನ್ನು ರಕ್ಷಿಸಿ-ಪೋಷಿಸುವುದಾಗಿ ಅಲ್ಲಿನ ಮಕ್ಕಳು ಪ್ರಮಾಣ ಮಾಡಿದ್ದಾರೆ. ‘CREATE LASTING IMPACT’ ಘೋಷಣೆಯ ಅಡಿ ರೋಟರಿ ಕ್ಲಬ್ ಈ ಅಭಿಯಾನ ನಡೆಸಿದೆ. ಸಂಘಟನೆ ಕಾರ್ಯದರ್ಶಿ ರತ್ನಾಕರ ಅಂಬಿಗ ಅವರು ಮಾತನಾಡಿ ಜಾಗತಿಕ ತಾಪಮಾನ ಏರಿಕೆ ಮತ್ತು ಮರಗಳ ಕಡಿತದಿಂದಾಗುವ ಅನಾಹುತಗಳ ಬಗ್ಗೆ ವಿದ್ಯಾರ್ಥಿಗಳಿಗೆ ವಿವರಿಸಿದ್ದಾರೆ. `ಒಬ್ಬ ವಿದ್ಯಾರ್ಥಿ ಕನಿಷ್ಠ 5 ಗಿಡ ನೆಟ್ಟು ಅದನ್ನು ಮರವಾಗಿಸುವ ಜವಾಬ್ದಾರಿ ತೆಗೆದುಕೊಂಡರೆ ನಮ್ಮ ಊರು ಹಸಿರಾಗುತ್ತದೆ’ ಎಂದವರು ಕರೆ ನೀಡಿದ್ದಾರೆ.
ರೋಟರಿ ಕ್ಲಬ್ ಪಶ್ಚಿಮ ಕಾರವಾರದ ಅಧ್ಯಕ್ಷ ಡಾಲರೀಚ್ ಫರ್ನಾಂಡೀಸ್ ಅವರು ಮಾತನಾಡಿ `ರೋಟರಿ ಕ್ಲಬ್ ಶಿಕ್ಷಣದ ಜೊತೆಗೆ ಸಾಮಾಜಿಕ ಕಾರ್ಯಗಳಲ್ಲಿಯೂ ಉತ್ತಮ ಕಾರ್ಯಕ್ರಮಗಳನ್ನು ನಡೆಸುತ್ತಿದೆ’ ಎಂದಿದ್ದಾರೆ. ಪ್ರಮುಖರಾದ ಶಿವಾನಂದ ನಾಯ್ಕ ಅವರು ಮಾತನಾಡಿ `ಮಕ್ಕಳಲ್ಲಿ ಶಾಲಾ ದಿನಗಳಲ್ಲೇ ನಾಯಕತ್ವ ಗುಣ ಬೆಳೆಯಬೇಕು’ ಎಂದು ಹೇಳಿದ್ದಾರೆ. ಕ್ಲಬ್’ನ ಮಾಜಿ ಅಧ್ಯಕ್ಷ ಅರವಿಂದ ನಾಯಕ, ಪ್ರಮುಖರಾದ ಶಿಲ್ಪಾ ಶಿವಾನಂದ ನಾಯ್ಕ, ಶಿಕ್ಷಕರಾದ ವಿಜಯಕುಮಾರ ನಾಯ್ಕ, ಸಂತೋಷ ಕಾಂಬಳೆ, ಜೆ ಬಿ ತಿಪ್ಪೇಸ್ವಾಮಿ, ವಿಕ್ರಾಂತ ತಾಂಡೇಲ್, ರೂಪಾಲಿ ಸಾವಂತ್ ವೇದಿಕೆಯಲ್ಲಿದ್ದರು. ಅನುಷ್ಕಾ ಸಾವಂತ್ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಶಾಲಾ ಮುಖ್ಯಾಧ್ಯಾಪಕ ಗಣೇಶ ಬೀಷ್ಟಣ್ಣನವರ್ ಅವರು ಸ್ವಾಗತಿಸಿದರು.