ಕ್ರಿಯಾಶೀಲ ಚಟುವಟಿಕೆಗಳ ಮೂಲಕ ಗಮನಸೆಳೆಯುತ್ತಿರುವ ಯಲ್ಲಾಪುರದ ಸರ್ಕಾರಿ ನೌಕರರ ಸಂಘವು ಈ ಭಾರಿಯ ಸರ್ವ ಸದಸ್ಯರ ಸಭೆಯನ್ನು ವಿಭಿನ್ನವಾಗಿ ಆಯೋಜಿಸಲು ನಿರ್ಧರಿಸಿದೆ. ಸಭೆಯ ಜೊತೆಗೆ ಅಧಿಕಾರಿ-ಸಿಬ್ಬಂದಿಗೆ ಮಾಹಿತಿ ಹಕ್ಕು ಕಾರ್ಯಾಗಾರ ಹಾಗೂ ಸಾಧಕ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನಡೆಸಲು ಸಂಘ ಆಸಕ್ತಿವಹಿಸಿದೆ.
ಯಲ್ಲಾಪುರದ ಸರ್ಕಾರಿ ನೌಕರರ ಭವನದಲ್ಲಿ ಸಂಘದ ಅಧ್ಯಕ್ಷ ಸಂಜೀವಕುಮಾರ ಹೊಸ್ಕೇರಿ ಅವರು ಈ ಎಲ್ಲಾ ಕಾರ್ಯಕ್ರಮದ ಆಮಂತ್ರಣ ಬಿಡುಗಡೆ ಮಾಡಿದ್ದು, ರೂಪುರೇಷೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ. `ಸರ್ಕಾರಿ ನೌಕರರ ಸಂಘದ ಸರ್ವಸದಸ್ಯರ ಮಹಾಸಭೆ, ಪ್ರತಿಭಾ ಪುರಸ್ಕಾರ ಹಾಗೂ ಮಾಹಿತಿ ಹಕ್ಕು ಕಾರ್ಯಾಗಾರವನ್ನು ಜುಲೈ 18ರಂದು ಬೆಳಗ್ಗೆ 10ಕ್ಕೆ ತಾಲೂಕು ಪಂಚಾಯತ ಸಭಾಭವನದಲ್ಲಿ ಆಯೋಜಿಸಲಾಗಿದೆ. ಶಾಸಕ ಶಿವರಾಮ ಹೆಬ್ಬಾರ್ ಹಾಗೂ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರ ಜೊತೆ ಅನೇಕ ಗಣ್ಯರು ಇದರಲ್ಲಿ ಭಾಗಿಯಾಗಲಿದ್ದಾರೆ’ ಎಂದವರು ವಿವರಿಸಿದ್ದಾರೆ.
`ಉತ್ತರ ಕನ್ನಡ ಜಿಲ್ಲಾಧಿಕಾರಿಗಳಿಗೆ ಕಾನೂನು ಸಲಹೆಗಾರರಾಗಿರುವ ನಿವೃತ್ತ ಜಿಲ್ಲಾ ನ್ಯಾಯಾಧೀಶ ರವಿ ನಾಯ್ಕ ಅವರು ಮಾಹಿತಿ ಹಕ್ಕು ಕಾಯ್ದೆ ಬಗ್ಗೆ ಮಾಹಿತಿ ನೀಡಿ, ಸಂವಾದ ನಡೆಸಲಿದ್ದಾರೆ. ಲೋಕೋಪಯೋಗಿ ಇಲಾಖೆಯ ನಿವೃತ್ತ ಅಭಿಯಂತರ ವಿ ಎಂ ಭಟ್ಟ ವಿದ್ಯಾರ್ಥಿಗಳಿಗೆ ಪ್ರೇರಣಾ ನುಡಿಗಳನ್ನಾಡಲಿದ್ದಾರೆ. ಶೈಕ್ಷಣಿಕ ಸಾಧನೆ ಮಾಡಿದ ಸರ್ಕಾರಿ ನೌಕರರ ಮಕ್ಕಳನ್ನು ಪುರಸ್ಕರಿಸಲಾಗುತ್ತದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸರ್ಕಾರಿ ನೌಕರರನ್ನು ಈ ವೇದಿಕೆಯಲ್ಲಿ ಗೌರವಿಸಲಾಗುತ್ತದೆ’ ಎಂದವರು ಹೇಳಿದ್ದಾರೆ.
ಸಂಘದ ಗೌರವಾಧ್ಯಕ್ಷ ಸುಭಾಸ ನಾಯಕ, ರಾಜ್ಯ ಪರಿಷತ್ ಸದಸ್ಯೆ ರೇಷ್ಮಾ ಶೇಟ್, ಉಪಾಧ್ಯಕ್ಷ ಆರ್ ಡಿ ಜನಾರ್ದನ, ಪ್ರಧಾನ ಕಾರ್ಯದರ್ಶಿ ಶರಣಪ್ಪ ಗೊಜನೂರು, ಜಂಟಿ ಕಾರ್ಯದರ್ಶಿಗಳಾದ ವೆಂಕಟರಮಣ ಭಟ್ಟ, ಮಹೇಶ ತಾಳಿಕೋಟಿ, ನಿರ್ದೇಶಕರಾದ ಅಜಿತ್ ನಾಯಕ, ಸುಧಾಕರ ನಾಯಕ ಅವರು ಈ ಎಲ್ಲಾ ಕಾರ್ಯಕ್ರಮಗಳ ಸಂಘಟನೆಗೆ ಶ್ರಮಿಸುತ್ತಿದ್ದು, ಸಂಜೀವಕುಮಾರ ಹೋಸ್ಕೇರಿ ಅವರು ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡುವಾಗ ಅವರೆಲ್ಲರೂ ಜೊತೆಯಾದರು.